ಬೀದರ್: ಕೊವಿಡ್-19 ವೈರಸ್ ಸೋಂಕು ತಡೆಗಟ್ಟಲು ಜಾರಿಗೆ ತರಲಾದ ಎರಡನೇ ಹಂತದ ಲಾಕ್ಡೌನ್ಗೆ ಜಿಲ್ಲೆಯ ಜನರು ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
13 ಜನರಲ್ಲಿ ಸೊಂಕು ಪತ್ತೆಯಾದ ಹಿನ್ನೆಲೆ ಬೀದರ್ ನಗರದ ಒಲ್ಡ್ ಸಿಟಿ ಭಾಗವನ್ನು ರೇಡ್ ಝೋನ್ ಏರಿಯಾ ಎಂದು ಘೋಷಣೆ ಮಾಡಲಾಗಿದ್ದು, 720 ಜನ ಪೊಲೀಸ್ ಸಿಬ್ಬಂದಿ ಬೀದಿ ಬೀದಿಗಳ ಸಣ್ಣ ಸಣ್ಣ ರಸ್ತೆಗಳನ್ನು ಸೀಲ್ ಮಾಡಿದಕ್ಕೆ ಯಾರೊಬ್ಬರು ಮನೆಯಿಂದ ಹೊರ ಬರಲು ಸಾಧ್ಯವಾಗಿರಲಿಲ್ಲ.
ಈಗ ಕೊರೊನಾ ವೈರಸ್ ಹರಡುವ ಭೀತಿ ಸಾರ್ವಜನಿಕರಲ್ಲಿ ಆವರಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ ಎರಡನೆ ಹಂತದ ಲಾಕ್ಡೌನ್ಗೆ ಜನ ಬೆಂಬಲ ಸಿಕ್ಕಿದೆ.
ನಗರದ ಬಸವೇಶ್ವರ ವೃತದಿಂದ ಚೌಬಾರ್, ಗವಾನ್ ಚೌಕ್ನಿಂದ ಅಂಬೇಡ್ಕರ್ ವೃತ, ಜಿಲ್ಲಾಧಿಕಾರಿಗಳ ನಿವಾಸದಿಂದ ಸಿದ್ದಾರ್ಥ ಕಾಲೇಜು ಸೇರಿದಂತೆ ಚಿಕಪೇಟ್ನಿಂದ ಶಹಪೂರ್ ಗೇಟ್ವರೆಗೆ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುವುದು ಕಂಡು ಬಂದಿದೆ.
ಅಲ್ಲದೇ ಅಗತ್ಯ ವಸ್ತುಗಳು ಹಾಗೂ ಕೃಷಿ ಸಾಮಗ್ರಿಗಳ ಖರೀದಿಗಾಗಿ ಜಿಲ್ಲಾಡಳಿತ ನೀಡಿದ ಅವಕಾಶವನ್ನು ಸಾಮಾಜಿಕ ಅಂತರ ಕಾಪಾಡುವ ಮೂಲಕ ಬಳಸಿಕೊಳ್ಳುತ್ತಿರುವ ನಿವಾಸಿಗರು ಸೋಂಕು ಹರಡದಂತೆ ಎಚ್ಚರಿಕೆ ವಹಿಸಿರುವುದು ಕಂಡು ಬಂದಿದೆ.