ಬೀದರ್ : ಜಮೀನಿಗೆ ಹೋಗುವ ದಾರಿ ವಿಚಾರವಾಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಹತ್ಯೆಗೈದಿರುವ ಘಟನೆ ಜಿಲ್ಲೆಯ ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಲ್ಲಿಕಾರ್ಜುನ (46) ಎಂದು ಗುರುತಿಸಲಾಗಿದೆ. ಈ ವೇಳೆ ಮಲ್ಲಿಕಾರ್ಜುನ ಪುತ್ರನಿಗೂ ಗಂಭೀರ ಗಾಯವಾಗಿದ್ದು, ಇವರನ್ನು ಇಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಮೀನಿಗೆ ತೆರಳುವ ದಾರಿಗೆ ಕಲ್ಲು ಹಾಕಿದ್ದನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಪ್ರಶ್ನೆ ಮಾಡಿದ್ದರು. ಈ ಸಂಬಂಧ ನಿರ್ಣಾ ಗ್ರಾಮದಿಂದ ಬಂದ 8-9 ಜನರ ತಂಡ ಮಲ್ಲಿಕಾರ್ಜುನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದೆ. ದಾಳಿಯಿಂದ ಗಂಭೀರ ಗಾಯಗೊಂಡ ಮಲ್ಲಿಕಾರ್ಜುನ ಜಮೀನಿನಲ್ಲೇ ಕುಸಿದುಬಿದ್ದಿದ್ದಾರೆ. ಬಳಿಕ ಅವರನ್ನು ಮನ್ನಾಏಖೇಳಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ನಿರ್ಣಾ ಗ್ರಾಮದ ಲಿಂಗರಾಜು, ಕಾಶಿನಾಥ್, ಜಗನಾಥ್ ಎಂಬುವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಈ ಸಂಬಂಧ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸತೀಶ್, ಲಿಂಗರಾಜು, ಧನರಾಜ್, ವೀರಶೆಟ್ಟಿ, ಚನ್ನು, ಪವನ್ ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಮನ್ನಾಏಖೇಳಿ ಅಂಬೇಡ್ಕರ್ ಸರ್ಕಲ್ ಬಳಿ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಓರ್ವ ಪುರುಷ, ಮಹಿಳೆಯ ಶವ ಪತ್ತೆ