ಬೀದರ್: ಮತ್ತೆ ದೇಶದ ಪ್ರಧಾನಿ ನರೇಂದ್ರ... ರಾಹುಲ್ ಗಾಂಧಿ ಆಗಬೇಕೆಂದು ಭಾಷಣದ ಭರಾಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಾಯ್ತಪ್ಪಿ ಎಡವಟ್ಟು ಮಾಡಿಕೊಂಡಿದ್ದಾರೆ.
ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರ ನಾಮಪತ್ರ ಸಲ್ಲಿಕೆ ನಂತರ ಬಹಿರಂಗ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ದೇಶದ ಸಮಗ್ರ ಅಭಿವೃದ್ಧಿಗೆ ಯುಪಿಎ ಸರ್ಕಾರ ಬರಬೇಕು. ಮತ್ತೊಮ್ಮೆ ನರೇಂದ್ರ..... ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಸರಿಪಡಿಸಿಕೊಂಡರು. ಭಾಷಣದಲ್ಲಿ ನರೇಂದ್ರ ಮೋದಿ ಅವರ ಹೆಸರು ಪ್ರಸ್ತಾಪಿಸಿ ನಂತರ ರಾಹುಲ್ ಗಾಂಧಿ ಹೆಸರನ್ನೇಳಿ ಯಡವಟ್ಟನ್ನು ಸರಿ ಮಾಡಿಕೊಂಡರು. ಕೆಲಕಾಲ ಸಭೆಯಲ್ಲಿದ್ದ ಮುಖಂಡರು ಮುಜುಗರಕ್ಕೀಡಾದರು.
ಬಳಿಕ ಮಾತನಾಡಿದ ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಅವರು ಜರ್ಮನ್ ದೇಶದಲ್ಲಿ ಜನರಿಂದ ಚುನಾಯಿತರಾಗಿ ಸರ್ವಾಧಿಕಾರಿ ಧೋರಣೆ ಮೂಲಕ ಪ್ರಜಾಪ್ರಭುತ್ವದ ಕೊಲೆ ಮಾಡಿದ ಹಿಟ್ಲರ್ನಂತೆ ಭಾರತದಲ್ಲಿ ನರೇಂದ್ರ ಮೋದಿ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಅಂತ ಕೇಳುವ ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾಗಲು ಕಾಂಗ್ರೆಸ್ ಕಾರಣ ಎಂಬುದನ್ನು ಮರೆತಿದ್ದಾರೆ ಎಂದು ಖರ್ಗೆ ಕಟುವಾಗಿ ಟೀಕಿಸಿದರು.