ಬೀದರ್: ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳು ವಿತರಣೆ ಮಾಡದೆ ನಿರ್ಲಕ್ಷ್ಯತನ ತೋರಿದ್ದಲ್ಲದೆ, ಕಳಪೆ ಸೋಯಾಬಿನ್ ಬೀಜ ವಿತರಣೆ ಮಾಡಿ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂದು ಆರೋಪಿಸಿ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ರೈತ ಸಂಘದ ಮುಖಂಡರು ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿ, ಮುಂಗಾರು ಹಂಗಾಮಿನ ಬಿತ್ತನೆ ಎಲ್ಲೆಡೆ ಆರಂಭವಾಗಿದೆ. ಆದರೆ ರೈತರಿಗೆ ಬೀಜ ವಿತರಣೆ ಮಾಡಬೇಕಾದ ಕೃಷಿ ಇಲಾಖೆ ಅಧಿಕಾರಿಗಳು ನಕಲಿ ಬೀಜ ಸರಬರಾಜಾಗಿವೆ ಎಂದು ಮೌನ ವಹಿಸಿದ್ದಾರೆ. ಇದರಿಂದ ರೈತರು ಬಿತ್ತನೆ ಬೀಜಗಳು ಇಲ್ಲದೆ ಕಂಗಾಲಾಗಿದ್ದಾರೆ. ರೈತರ ಈ ಸ್ಥಿತಿಗೆ ಕಾರಣರಾದ ಅಧಿಕಾರಿಗಳನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಅಣದೂರೆ ನೇತೃತ್ವದಲ್ಲಿ ಹಲವು ರೈತರು ಕೃಷಿ ಇಲಾಖೆ ಕಚೇರಿಗೆ ಕೆಲ ಕಾಲ ಬೀಗ ಜಡಿದರು. ಈ ನಡುವೆ ಮಾರ್ಕೆಟ್ ಪೊಲೀಸ್ ಠಾಣೆ ಪಿಎಸ್ಐ ಸಂಗೀತಾ ಸಿಂಧೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.