ಬಸವಕಲ್ಯಾಣ : ತರಕಾರಿ ಮಾರುಕಟೆಯಲ್ಲಿ ರೈತರ ಮೇಲೆ ನಡೆಯುತ್ತಿರುವ ಶೋಷಣೆ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ (ಕೂಡಿಹಳ್ಳಿ ಬಣ) ಒತ್ತಾಯಿಸಿದೆ.
ರೈತ ಸಂಘದ ಪದಾಧಿಕಾರಿಗಳು ಮತ್ತು ತರಕಾರಿ ಬೆಳೆಯುವ ರೈತರ ನಿಯೋಗದ ಸದಸ್ಯರು ತಹಶೀಲ್ದಾರ್ ಸಾವಿತ್ರಿ ಸಲಗರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತರಕಾರಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆಂದು ಬರುವ ರೈತರು ನಾನಾ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ದಲ್ಲಾಳಿಗಳದ್ದೆ ದರ್ಬಾರ್ ನಡೆಯುತ್ತಿದೆ. ಸಮಯಕ್ಕೆ ಸರಿಯಾಗಿ ಹರಾಜು ಪ್ರಕ್ರಿಯೆ ನಡೆಯುತ್ತಿಲ್ಲ. ದಲ್ಲಾಳಿಗಳ ಹಾವಳಿಯಿಂದಾಗಿ ತರಕಾರಿಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಅವರು ಕೇಳಿದಷ್ಟು ದರಕ್ಕೆ ತರಕಾರಿ ಮಾರಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ತರಕಾರಿ ಬೆಳೆರಾರರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಒಂದು ವಾರದ ಒಳಗಾಗಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರೊಂದಿಗೆ ಸೇರಿ ಸಂಘದಿಂದ ಎಪಿಎಂಸಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಸಂಘದ ತಾಲೂಕಾ ಗೌರವಾಧ್ಯಕ್ಷರಾದ ಚಂದ್ರಶೇಖರ ಜಮಖಂಡಿ, ಸಂಘದ ಪ್ರಮುಖರಾದ ಸುಭಾಷ ರಗಟೆ, ಸಿದ್ರಾಮಪ್ಪ ಬಾಲಕುಂದೆ, ಜಯಪ್ರಕಾಶ ಸದಾನಂದೆ, ಮರೆಪ್ಪಾ ಪಾಟೀಲ, ತ್ರಿಪುರಾಂತ ಪಿ.ಕೆ.ಪಿ.ಎಸ್ ಅಧ್ಯಕ್ಷ ಗುಂಡಪ್ಪಾ ಬಿರಾದಾರ ಸೇರಿದಂತೆ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತಿತರಿದ್ದರು.