ಬೀದರ್ : ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಗ್ರಾಮ ಪಂಚಾಯತ್‌ಗಳ ಪಾತ್ರದ ಕುರಿತು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಎರಡು ಗ್ರಾಮ ಪಂಚಾಯತ್‌ಗಳಿಗೆ ದಿಢೀರ್ ಭೇಟಿ ನೀಡಿ ಪರಿಶಿಲನೆ ನಡೆಸಿದ್ದು, ಅಸಮರ್ಪಕ ಕೆಲಸ ಮಾಡಿದ ಇಬ್ಬರು ಪಿಡಿಒಗಳಿಗೆ ನೋಟಿಸ್ ನೀಡಲು ಸೂಚಿಸಿದ್ದಾರೆ.
ಜಿಲ್ಲೆಯ ಔರಾದ್ ತಾಲೂಕಿನ ಸಂತಪೂರ್ ಹಾಗೂ ಕೌಠಾ ಗ್ರಾಮ ಪಂಚಾಯತ್ ಕಾರ್ಯಾಲಯಗಳಿಗೆ ಭೇಟಿ ನೀಡಿದ ಪ್ರಭು ಚವ್ಹಾಣ್, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಷ್ಟು ಜನರಿಗೆ ಸೋಂಕು ತಗುಲಿದೆ? ಎಷ್ಟು ಜನ ಹೋಂ ಕ್ವಾರಂಟೈನ್ ನಲ್ಲಿದ್ದಾರೆ.? ಎಷ್ಟು ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.? ಎಷ್ಟು ಜನ ಮೃತಪಟ್ಟಿದ್ದಾರೆ.? ಎಂದು ಪಿಡಿಒಗಳ ಮುಂದೆ ಪ್ರಶ್ನೆಗಳ ಸುರಿಮಳೆ ಮಾಡಿದ್ದಾರೆ.
ಆದ್ರೆ, ಸಚಿವರ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಸಂತಪೂರ ಹಾಗೂ ಕೌಠಾ ಪಿಡಿಒಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಯಾವುದೇ ಮಾಹಿತಿ ನೀಡದಿದ್ದಾಗ ಸಚಿವರು ಸ್ಥಳದಲ್ಲೇ ಇದ್ದ ತಾಲೂಕು ಪಂಚಾಯತ್ ಅಧಿಕಾರಿ ಮಾಣಿಕರಾವ್ ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡು, ಇಬ್ಬರು ಪಿಡಿಒಗಳಿಗೆ ನೋಟಿಸ್ ಜಾರಿ ಮಾಡುವಂತೆ ಸೂಚನೆ ನೀಡಿದರು.
ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಸೋಂಕಿತರ ಸುರಕ್ಷೆ ಹಾಗೂ ಆರೈಕೆಯ ಎಲ್ಲ ಕ್ರಮಕೈಗೊಳ್ಳಬೇಕು. ಅಧಿಕಾರಿಗಳು ಮಾಹಿತಿ ನೀಡಿಲ್ಲ ಅಂದ್ರೆ ಅದರರ್ಥ ಅವರು ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಭಾಗಿಯಾಗಿಲ್ಲ ಎಂದು ಪರಿಗಣಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.