ಬೀದರ್: 12ನೇ ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಸಾರಿದ ಜಗತ್ತಿನ ಮೊದಲ ಸಂಸತ್ ಎಂದೇ ಖ್ಯಾತಿಯಾದ ಅನುಭವ ಮಂಟಪದ ಸ್ತಬ್ಧ ಚಿತ್ರ ಪ್ರದರ್ಶನ ನಡೆಯಲಿದೆ.
ಗಣರಾಜ್ಯೋತ್ಸವ ನಿಮಿತ್ತ ಪ್ರತಿ ವರ್ಷ ಪ್ರಧಾನಿಗಳ ಸಮ್ಮುಖದಲ್ಲಿ ಕೆಂಪುಕೋಟೆ ಆವರಣದಲ್ಲಿ ನಡೆಯಲಿರುವ ದೇಶದ ವಿವಿಧ ಭಾಗದ ಪರಂಪರೆ ಹಾಗೂ ಸಾಂಸ್ಕೃತಿಕ ಅನಾವರಣದ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಈ ಬಾರಿ ರಾಜ್ಯ ಸರ್ಕಾರದಿಂದ ಅನುಭವ ಮಂಟಪದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಇಲಾಖೆ ಹೇಳಿದೆ.
ಶರಣರ ವಚನ ಸಾಹಿತ್ಯ, ವಚನಗಳ ಹಿಂದಿ ಅನುವಾದಿತ ಅಕ್ಷರಗಳ ಪಲ್ಲಟ, ಬಸವಣ್ಣ ಸೇರಿ ಕಲ್ಯಾಣ ಕ್ರಾಂತಿ ವೇಳೆಯಲ್ಲಿ ಸಾರಲಾದ ಸಾಮಾಜಿಕ ಸಮಾನತೆಯ ಸಾಕ್ಷಾತ್ ದರ್ಶನದ ಸ್ತಬ್ಧ ಚಿತ್ರ ಸಿದ್ಧವಾಗಿದೆ. ಈ ಬಾರಿ ಗಣರಾಜ್ಯೋತ್ಸವ ಸಂಭ್ರಮಕ್ಕೆ ಅನುಭವ ಮಂಟಪ ಸ್ತಬ್ಧ ಚಿತ್ರ ಸಾಕ್ಷಿಯಾಗಿದಕ್ಕೆ ಜಿಲ್ಲೆಯ ಬಸವಕಲ್ಯಾಣ ನಗರದ ಅನುಭವ ಮಂಟಪದ ಅಧ್ಯಕ್ಷ ಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರು ಸಂತಸ ವ್ಯಕ್ತಪಡಿಸಿದ್ದಾರೆ. ವಚನಗಳು ನೇರವಾಗಿ ಪ್ರತಿಯೊಬ್ಬರ ಮೇಲೆ ಪ್ರಭಾವ ಬೀರಲು ಸರ್ಕಾರ ಅವಕಾಶ ಮಾಡಿಕೊಟ್ಟಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.