ಬೀದರ್: ನನ್ನ ಕ್ಷೇತ್ರದಲ್ಲಿ ಜನ ಸಾಯ್ತಾ ಇದಾರೆ, ಸತ್ತರೆ ಅದನ್ನ ತಂದು ನಿಮ್ಮ ತಲೆಗೆ ಕಟ್ಟುತ್ತೇನಿ. ನಿಮ್ಮ ಹೆಸರು ಹೇಳಿ ಜನ ಸಾಯ್ತಾ ಇದಾರೆ. 10 ಜನ ಸತ್ತರು ನಾಚಿಕೆ ಆಗೊಲ್ಲವಾ, ನಿಮಗೆ ಮಾನವೀಯತೆ ಇದೆಯಾ...? ಹೀಗೆ ಶಾಸಕ ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ಮೇಲೆ ಗರಂ ಆದ ಘಟನೆ ನಡೆದಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೊರೊನಾ ವೈರಾಣು ನಿಯಂತ್ರಣ ಕುರಿತ ಸಭೆಯಲ್ಲಿ ಭಾಲ್ಕಿ ಶಾಸಕ ಈಶ್ವರ ವಿಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು.
ಭಾಲ್ಕಿ ತಾಲೂಕು ಆಸ್ಪತ್ರೆ ಸಿಎಂಓ ಡಾ.ರೂಬಿನಾ ಅವರನ್ನು ಬದಲಾವಣೆ ಮಾಡಬೇಕು ಎಂದು ಕೆಡಿಪಿ ಸಭೆಯಲ್ಲಿ ಮನವಿ ಮಾಡಿದ ಬದಲಾವಣೆ ಮಾಡಿಲ್ಲ. ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಹೀಗಿರುವಾಗ ಸರ್ಕಾರದ ಮನಸ್ಥಿತಿ ಜನಪರವಾಗಿಲ್ಲ ಎಂದು ಕೋಪದಲ್ಲೇ ಮಾತನಾಡಿದರು.
ಕಾಟಾಚಾರಕ್ಕೆ ಮೀಟಿಂಗ್ ಮಾಡುವುದಿದ್ದರೆ ನಮಗ್ಯಾಕ್ರಿ ಕರೆಯುತ್ತೀರಿ ಏನಾದರೂ ಮಾಡಕೊಳ್ಳಿ ಎಂದು ಖಂಡ್ರೆ ಅಸಮಾಧಾನ ಹೊರ ಹಾಕಿದರು.
ಸಭೆಯಲ್ಲಿ ಸಂಸದ ಭಗವಂತ ಖೂಬಾ, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಸೇರಿದಂತೆ ಶಾಸಕರು ಮುಖಂಡರು ಉಪಸ್ಥಿತರಿದ್ದರು.