ಬೀದರ್: ಶಂಕಿತ ಡೆಂಘೀ ಜ್ವರಕ್ಕೆ ನರಳಿ ಬಾಲಕಿಯೊಬ್ಬಳು ಸಾವನಪ್ಪಿರುವ ಕುರಿತು ಈಟಿವಿ ಭಾರತ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದೀಗ ವರದಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೀಡಿತ ಪ್ರದೇಶದಲ್ಲಿ ಆರೋಗ್ಯ ತಪಾಸಣೆ ಕಾರ್ಯ ಆರಂಭಿಸಿದೆ.
ನಗರದ ಪ್ರತಾಪ ನಗರದಲ್ಲಿ ಅನ್ನಪೂರ್ಣ ಎಂಬ 7 ವರ್ಷದ ಬಾಲಕಿ ಶಂಕಿತ ಡೆಂಘೀ ಜ್ವರದಿಂದ ಸಾವನಪ್ಪಿರುವ ಕುರಿತು 'ಈಟಿವಿ ಭಾರತ' ದಲ್ಲಿ 'ಶಂಕಿತ ಡೆಂಘಿ ಜ್ವರಕ್ಕೆ ಬಾಲಕಿ ಬಲಿ, ಶಾಪ ಹಾಕ್ತಿದ್ದಾರೆ ಬಡಾವಣೆ ಜನ' ತಲೆ ಬರಹದ ಅಡಿಯಲ್ಲಿ ವರದಿ ಪ್ರಸಾರ ಮಾಡಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್ ನೇತೃತ್ವದ ಅಧಿಕಾರಿಗಳ ತಂಡ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
ಮೃತ ಅನ್ನಪೂರ್ಣ ಅವರ ಮನೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ಮನೆಯವರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಅಲ್ಲದೆ ಬಡಾವಣೆ ನಿವಾಸಿಗರ ಆರೋಗ್ಯ ತಪಾಸಣೆ ಕೂಡ ನಡೆಸಿದ್ದಾರೆ. ನಾಳೆ ಒಂದು ದಿನ ಇಡಿ ಬಡಾವಣೆಯ ನಿವಾಸಿಗರ ಆರೋಗ್ಯ ತಪಾಸಣೆಗೆ ಆರೋಗ್ಯ ಸೇವಕರ ತಂಡ ಸ್ಥಳದಲ್ಲೇ ಬೀಡು ಬಿಟ್ಟಿದೆ.
ಇನ್ನು ಮೃತ ಅನ್ನಪೂರ್ಣ ಚಿಕಿತ್ಸೆ ಪಡೆದ ದಾಖಲೆಗಳನ್ನು ಪರಿಶಿಲಿಸಲಾಗಿದ್ದು, ಕಾರ್ಡ್ ಟೆಸ್ಟ್ ನಲ್ಲಿ ಡೆಂಘೀ ಪಾಜಿಟಿವ್ ಅಂತ ಬಂದರೂ ಎಲಿಜಾ ರಿಡರ್ನಲ್ಲಿ ಅದರ ಪರಿವೀಕ್ಷಣೆ ಆಗಿಲ್ಲ. ಹೀಗಾಗಿ ಡೆಂಘೀ ಜ್ವರದಿಂದ ಸಾವನಪ್ಪಿಲ್ಲ, ಬದಲಾಗಿ ವೈರಲ್ ಕಾರ್ಡಿಯಾಸ್ ಇನ್ಪೆಕ್ಷನ್ನಿಂದ ಸಾವನಪ್ಪಿದ್ದಾಳೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಎ.ಜಬ್ಬಾರ್ ಸ್ಪಷ್ಟಪಡಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಆಗಾಗ ಸುರಿಯುತ್ತಿರುವ ಜಿಟಿ-ಜಿಟಿ ಮಳೆಯಿಂದಾಗಿ ವೈರಾಣುಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಈ ಬಡಾವಣೆಯಲ್ಲಿ ಸ್ವಚ್ಛತೆ ಇಲ್ಲದಕ್ಕೆ ಎಂಟಿಕೊ, ಕಾಕಾಸೊಕಿ ಹಾಗೂ ಇನ್ ಫ್ರೈಸ್ ಹೆಚ್ ವೈರಸ್ಗಳು ಹೆಚ್ಚಾಗಿವೆ. ಈ ಕುರಿತು ಸ್ವಚ್ಛತೆ ಕಾಪಾಡುವಂತೆ ನಗರಸಭೆಗೆ ಪತ್ರ ಬರೆಯುವುದಾಗಿ ಡಾ. ಜಬ್ಬಾರ್ ಹೇಳಿದ್ದಾರೆ.