ಬೀದರ್: ಕೊರೊನಾ ವೈರಸ್ ಹರಡುವ ಭೀತಿ ನಡುವೆ ಬೇಸಿಗೆಯಲ್ಲಿ ಉಲ್ಬಣಗೊಂಡ ಕುಡಿಯುವ ನೀರಿನ ಸಮಸ್ಯೆ ಸಮರ್ಥವಾಗಿ ನಿಭಾಯಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಭಾಲ್ಕಿ ವಿಧಾನಸಭೆ ಜನರು ಕೊರೊನಾ ನಿಯಂತ್ರಿಸಲು ಸಹಕರಿಸಬೇಕಿದೆ. ಈ ನಿಟ್ಟಿನಲ್ಲಿ ಯಾರೊಬ್ಬರೂ ಮನೆಯಿಂದ ಹೊರ ಬಾರದೆ ಸರ್ಕಾರದ ನಿಯಮಗಳನ್ನು ಪಾಲಿಸಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಬೇಸಿಗೆ ಆರಂಭದ ದಿನಗಳಿಂದ ಭಾಲ್ಕಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಹೀಗಾಗಿ ತಾಲೂಕು ಆಡಳಿತ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಮುಂದಾಗಿದೆ. ಈ ವೇಳೆಯಲ್ಲಿ ಕೊರೊನಾ ವೈರಸ್ ಸೊಂಕು ಹರಡದಂತೆ ಸಾಮಾಜಿಕ ಅಂತರ ಕಾಪಾಡಬೇಕಾಗಿದೆ. ಟ್ಯಾಂಕರ್ ಮನೆ ಮುಂದೆ ಬಂದಾಗ ಎಲ್ಲರೂ ನೀರಿಗಾಗಿ ಒಮ್ಮಲೆ ಮುಗಿ ಬೀಳುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಜಾಗರೂಕತೆಯಿಂದ ವರ್ತಿಸಿ ಎಂದು ಮನವಿ ಮಾಡಿದ್ದಾರೆ.