ಬಸವಕಲ್ಯಾಣ (ಬೀದರ್): ಖಾನಾಪುರ ರಸ್ತೆಬದಿಯ ಖಾಸಗಿ ಬಡಾವಣೆಯೊಂದರ ಮುಳ್ಳಿನ ಪೊದೆಯಲ್ಲಿ ಸಿಕ್ಕ ಒಂದೂವರೆ ತಿಂಗಳ ಅನಾಥ ಮಗುವಿಗೆ ಕೊರೊನಾ ಸೋಂಕು ತಗುಲಿದೆ. ಜೂನ್ 30ರ ರಾತ್ರಿ ಅನಾಥ ಸ್ಥಿತಿಯಲ್ಲಿ ಪತ್ತೆಯಾದ ಹೆಣ್ಣು ಮಗುವನ್ನು ಬೀದರ್ ಆಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಲಾಗುತ್ತಿದೆ.
ಕೊರೊನಾ ಪರೀಕ್ಷೆಯಲ್ಲಿ ಮಗುವಿಗೆ ಸೋಂಕು ಇರುವುದು ಖಚಿತಗೊಂಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ರಸ್ತೆ ಬದಿಯಲ್ಲಿ ಮಗು ಅಳುತ್ತಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದು ನಗರ ಠಾಣೆ ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಗುವನ್ನು ಎತ್ತಿಕೊಂಡು ಸ್ಥಳೀಯ ಸರ್ಕಾರಿ ಆಸ್ಪತ್ರೆ ದಾಖಲಿಸಿದ್ದಾರೆ. ನಂತರ ಮಗುವನ್ನು ಬೀದರ್ ಬ್ರಿಮ್ಸ್‌ಗೆ ಕಳಿಸಲಾಗಿತ್ತು. ಇದೀಗ ಮಗು ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.
ತಾಲೂಕು ಸೇರಿದಂತೆ ಗಡಿಯಲ್ಲಿರುವ ಮಹಾರಾಷ್ಟ್ರದ ಗಡಿಗ್ರಾಮಗಳಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದೆ. ಸೋಂಕಿತ ಮಗುವಿಗೆ ಆರೈಕೆ ಮಾಡಬೇಕಾದ ಭಯದಿಂದ ಪಾಲಕರು ಮಗುವನ್ನು ರಸ್ತೆ ಬದಿ ಬಿಟ್ಟು ತೆರಳಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗುತ್ತಿದೆ.