ಬಸವಕಲ್ಯಾಣ: ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಮಂಗಳವಾರ ಮತ್ತೆ 4 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇದುವರೆಗೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 106ಕ್ಕೆ ಏರಿದೆ.
ಸೋಮವಾರ ಒಂದೇ ದಿನ 26 ಜನರಲ್ಲಿ ಸೋಂಕು ದೃಢಪಟ್ಟಿದ್ದವು. ಮಂಗಳವಾರ ತಾಲೂಕಿನ ಗಂಗಾರಾಮ ತಾಂಡಾ-1, ಚಿಕನಾನಾಂವ ತಾಂಡಾ-1, ಹಾಮುನಗರ ಹಾಗೂ ಜಾಫರವಾಡಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಸೋಂಕಿತರೆಲ್ಲರೂ ಮಹಾರಾಷ್ಟ್ರದಿಂದ ಮರಳಿ ಬಂದವರಾಗಿದ್ದಾರೆ.
ಗಂಗಾರಾಮ ತಾಂಡಾ ಮತ್ತು ಚಿಕನಾಗಾಂವ ತಾಂಡಾದಲ್ಲಿ ಸೋಂಕು ಪತ್ತೆಯಾದ ಇಬ್ಬರು ಮುಂಬೈನಿಂದ ಮರಳಿದ್ದರು. ಈ ಹಿಂದೆ ಇವರಿದ್ದ ಕ್ವಾರಂಟೈನ್ ಕೇಂದ್ರದಲ್ಲಿ ವ್ಯಕ್ತಿಯೊಬ್ಬ ಸೋಂಕಿನಿಂದ ಬಳಲುತ್ತಿದ್ದನು. ಈ ಹಿನ್ನೆಲೆ ಆ ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ ಈ ಇಬ್ಬರು ಕ್ವಾರಂಟೈನಲ್ಲಿಯೇ ಇದ್ದರು.
ಜಾಪರವಾಡಿಯ ವ್ಯಕ್ತಿ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಮೂರು ದಿನಗಳ ಹಿಂದೆ ಮನೆಗೆ ಮರಳಿದ್ದ. ಮನಗೆ ಬಂದ ಮೇಲೆ ಪಾಜಿಟಿವ್ ವರದಿ ಬಂದಿದ್ದು, ಕುಟುಂಬದ ಸದಸ್ಯರು ಸೇರಿದಂತೆ ಗ್ರಾಮದ ಇತರರೊಂದಿಗೆ ಈತ ಸಂಪರ್ಕಕ್ಕೆ ಬಂದಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸೋಂಕು ಪತ್ತೆಯಾದ ಹಿನ್ನೆಲೆ ಆಯಾ ಗ್ರಾಮ ಹಾಗೂ ತಾಂಡಾಗಳಲ್ಲಿ ಸರ್ಕಾರದ ನಿರ್ದೇಶನದಂತೆ ಮುಂಜಾಗೃತ ಕ್ರಮ ಕೈಗೊಳ್ಳಲಾಗುತ್ತಿದೆ.