ಬಸವಕಲ್ಯಾಣ(ಬೀದರ್): ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರಿಗೆ ಹಣದ ಆಮಿಷವೊಡ್ಡಿರುವ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪಕ್ಷದ ಮುಖಂಡರು ಮತದಾರರಿಗೆ ಸಾವಿರ ರೂ. ಹಣದ ಆಮಿಷವೊಡ್ಡಿದ್ದಾರೆ ಎನ್ನಲಾದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ತಾಲೂಕಿನ ಮುಚಳಂಬ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರು ಗ್ರಾ.ಪಂ ಸದಸ್ಯರ ಸಭೆ ನಡೆಸಿದ್ದರು. ಸಭೆಯಲ್ಲಿ ಭಾಗವಹಿಸಿದ ಸದಸ್ಯರಿಗೆ ಹೆಚ್ಚಿನ ಹಣ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಬಿಜೆಪಿಯಿಂದ ಈಗಾಗಲೇ ಮತದಾರರಿಗೆ 10 ಸಾವಿರ ರೂ. ಹಣ ನೀಡುತ್ತಿದ್ದಾರೆ. ಆದ್ರೆ ನಾವು ಪ್ರತಿಯೊಬ್ಬರಿಗೆ ತಲಾ 20 ಸಾವಿರ ರೂ. ಅಡ್ವಾನ್ಸ್ ನೀಡಲು ಬಂದಿದ್ದೇವೆ. ಮುಂದೆ ಬಿಜೆಪಿಯವರು ಎಷ್ಟು ಕೊಡ್ತಾರೆಯೋ ಅದಕ್ಕಿಂತಲೂ ಹೆಚ್ಚಿಗೆ ಹಣವನ್ನು ನಾವು ನಿಮಗೆ ಕೊಡುತ್ತೇವೆ. ಅವರು 50 ಸಾವಿರ ಕೊಟ್ಟಲ್ಲಿ ನಾವು 60 ಸಾವಿರ ರೂ. ಕೊಡುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಮತದಾರರಿಗೆ ಆಮಿಷವೊಡ್ಡಿರುವ ಆರೋಪದ ವಿಡಿಯೋ ವೈರಲ್ ಆಗ್ತಿದೆ.
ಕಾಂಗ್ರೆಸ್ ಪಕ್ಷದ ಮುಖಂಡರಾದ ಆನಂದ್ ದೇವಪ್ಪ, ಶಿವರಾಜ ನರಶೆಟ್ಟಿ, ಅರ್ಜುನ್ ಕನಕ್ ಸೇರಿದಂತೆ ಪ್ರಮುಖರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಪರಿಷತ್ ಚುನಾವಣೆಗೆ ಎರಡು ಪಕ್ಷಗಳ ಮುಖಂಡರು ಮತದಾರರಿಗೆ ಬಹಿರಂಗವಾಗಿಯೇ ಹಣ ಹಂಚುತ್ತಿದ್ದಾರೆ ಎನ್ನುವ ಆರೋಪಗಳು ಈಗ ಎಲ್ಲೆಡೆ ಕೇಳಿ ಬರುತ್ತಿದ್ದು, ಚುನಾವಣಾ ಆಯೋಗ ಯಾವ ರೀತಿ ಕ್ರಮಕ್ಕೆ ಮುಂದಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.