ಬಸವಕಲ್ಯಾಣ: ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಮಾಸ್ಕ್ ಸೇರಿದಂತೆ ಇತರ ಸುರಕ್ಷತಾ ಪರಿಕರಗಳ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ನಗರದ ಸರ್ಕಾರಿ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಲಾಯಿತು.
ಆಸ್ಪತ್ರೆ ಬಳಿ ಜಮಾಯಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಕಾರ್ಯಕರ್ತರು, ಅಗತ್ಯ ಸೌಲಭ್ಯ ಕಲ್ಪಿಸುವವರೆಗೆ ಕರ್ತವ್ಯಕ್ಕೆ ಹಾಜರಾಗವುದಿಲ್ಲ ಎಂದು ಪಟ್ಟು ಹಿಡಿದರು. ಕೊರೊನಾ ಹಿನ್ನೆಲೆಯಲ್ಲಿ ನಗರದಲ್ಲಿ ಮನೆ ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸುವ ಜವಾಬ್ದಾರಿ ನೀಡಿದ್ದಾರೆ. ಆದರೆ ಇದುವರೆಗೆ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಇತರ ಯಾವುದೇ ಸುರಕ್ಷತಾ ಪರಿಕರಗಳನ್ನು ನೀಡಿಲ್ಲ. ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್ ಸೇರಿದಂತೆ ಇತರ ಸೌಲಭ್ಯಗಳನ್ನು ಕಲ್ಪಿಸುವಂತೆ ಸಾಕಷ್ಟು ಸಲ ಮನವಿ ಮಾಡಿದರೂ ನಮ್ಮ ಮಾತಿಗೆ ಯಾರೂ ಕಿವಿಗೊಡುತ್ತಿಲ್ಲ. ಸರ್ಕಾರದಿಂದ ಯಾವುದೇ ವಸ್ತುಗಳು ಸರಬರಾಜು ಮಾಡಿಲ್ಲ. ಕೆಲಸ ಮಾಡುವುದಾದರೆ ಹಾಗೆಯೇ ಮಾಡಬೇಕು. ಇಲ್ಲವಾದರೆ ಮನೆಗೆ ತೆರಳಿ ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಉಡಾಫೆ ಉತ್ತರ ನೀಡುತಿದ್ದಾರೆ ಎಂದು ಆರೋಪಿಸಿದರು.
ಆರೋಗ್ಯ ಇಲಾಖೆ ಸಿಬ್ಬಂದಿಯ ದಿಢೀರ್ ಪ್ರತಿಭಟನೆಯಿಂದ ಎಚ್ಚೆತ್ತ ತಾಲೂಕು ನೋಡಲ್ ಅಧಿಕಾರಿ ರವಿ ಸಿಸರ್ಗೆ ಸ್ಥಳಕ್ಕೆ ಧಾವಿಸಿ ಮಾಸ್ಕ್ ವಿತರಿಸಿದರು. ಅಲ್ಲದೇ ನಾಳೆಯಿಂದ ನಿಯಮಿತವಾಗಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವದು ಎಂದು ಭರವಸೆ ನೀಡಿದರು.