ಬಸವಕಲ್ಯಾಣ: ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಶರಣರ ಅನುಭವ ಮಂಟಪ ಮರು ನಿರ್ಮಾಣಕ್ಕೆ ಕಾಲ ಕೂಡಿಬಂದಂತೆ ಕಾಣಿಸುತ್ತಿದೆ. ಸರ್ಕಾರದಿಂದ ನಿರ್ಮಾಣ ಮಾಡಲಾಗುತ್ತಿರುವ ಉದ್ದೇಶಿತ ಅನುಭವ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಅನುಭವ ಮಂಟಪಕ್ಕೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಇಲ್ಲಿಯ ಬಿಕೆಡಿಬಿ ವಿಶೇಷಾಧಿಕಾರಿಯೂ ಆದ ಡಾ.ಹೆಚ್.ಆರ್.ಮಹಾದೇವ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ನಗರದ ಹೊರ ವಲಯದಲ್ಲಿರುವ ಪರಿಸರದಲ್ಲಿಯೇ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಶೀಘ್ರ ಕೆಲಸಕ್ಕೆ ಚಾಲನೆ ನೀಡಲು ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವಿಶೇಷಾಧಿಕಾರಿ ಡಾ.ಹೆಚ್.ಆರ್.ಮಹಾದೇವ ಅವರು ಇತ್ತೀಚೆಗೆ ಸ್ಥಳ ಪರಿಶೀಲಿಸಿ, ಅಗತ್ಯವರುವ ಜಮೀನು ಖರೀದಿ ಸಂಬಂಧ ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದಾರೆ.
ಅನುಭವ ಮಂಟಪ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಭೂ ಮಾಲೀಕರಿಂದ ನಿಯಮನುಸಾರ ಖರೀದಿಸುವ ಪ್ರಕ್ರಿಯೆ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು, ಅನುಭವ ನಿರ್ಮಾಣದ ಯೋಜನೆಯನ್ನು ಡಿಪಿಆರ್ ಪರಿವರ್ತಿಸಲು ಶೀಘ್ರದಲ್ಲಿ ಟೆಂಡರ್ ಕರೆದು ಆದಷ್ಟು ಬೇಗ ಅಡಿಗಲ್ಲು ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಅನುಭವ ಮಂಟಪ ಟ್ರಸ್ಟ್ ಹೆಸರಿನಲ್ಲಿರುವ 8 ಎಕರೆ 17 ಗುಂಟೆ ಭೂಮಿಯನ್ನು ನೂತನ ಅನಭವ ಮಂಟಪ ನಿರ್ಮಾಣಕ್ಕಾಗಿ ಬಿಕೆಡಿಬಿಗೆ ಉಚಿತವಾಗಿ ನೀಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು ಬಿಕೆಡಿಬಿ ವಿಶೇಷಾಧಿಕಾರಿಗಳಿಗೆ ಒಪ್ಪಿಗೆ ಪತ್ರವನ್ನು ನೀಡಿದರು.
ಭಾಲ್ಕಿಯ ಶ್ರೀ ಗುರುಬಸವ ಪಟ್ಟದೇವರು, ಬಿಕೆಡಿಬಿ ಆಯುಕ್ತ ಶರಣಬಸಪ್ಪ ಕೊಟ್ಟಪ್ಪಗೋಳ, ತಹಶೀಲ್ದಾರ ಸಾವಿತ್ರಿ ಸಲಗರ್, ಬಿಕೆಡಿಬಿ ತಹಶೀಲ್ದಾರ ಮೀನಾಕುಮಾರಿ ಬೋರಾಳಕರ್, ಟ್ರಸ್ಟ್ ಕಾರ್ಯದರ್ಶಿ ಡಾ.ಎಸ್.ಬಿ.ದುರ್ಗೆ, ಕಾಶಪ್ಪ ಬಾಲಿಕಿಲೆ, ನಿವೃತ್ತ ಅಧಿಕಾರಿ ಬಲಭೀಮ ಕಾಂಬಳೆ, ಪ್ರಮುಖರಾದ ಗುರುನಾತ ಕೊಳ್ಳೂರ, ಡಾ.ಸುಶಿಲಾಬಾಯಿ ಹೊಳಕುಂದೆ, ಶಿವರಾಜ ನರಶೆಟ್ಟಿ, ಬಾಬು ವಾಲಿ, ಡಾ. ಜಗನ್ನಾಥ ಹೆಬ್ಬಾಳೆ ಉಪಸ್ಥಿತರಿದ್ದರು.