ಬಸವಕಲ್ಯಾಣ: ರಸ್ತೆ ರಿಪೇರಿಗಾಗಿ ಅಗೆದ ಗುಂಡಿಯಲ್ಲಿ ಒಂದೇ ದಿವಸ 5ಕ್ಕೂ ಹೆಚ್ಚು ಬೈಕ್ಗಳು ಬಿದ್ದು, 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ತಡೋಳಾ - ಕೌಡಿಯಾಳದಲ್ಲಿ ನಡೆದಿದೆ.
ಹೈದರಾಬಾದ್ನಿಂದ ಮುಂಬೈಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-65ರ ಮೇಲಿರುವ ತಡೋಳ ಹಾಗೂ ಕೌಡಿಯಾಳ ಗ್ರಾಮದ ಮಧ್ಯೆ ರಸ್ತೆ ದುರಸ್ತಿ ಸಂಬಂಧ ಡಾಂಬಾರು ರಸ್ತೆಯ ಮೇಲ್ಬಾಗದಲ್ಲಿ ಸುಮಾರು 3 ಇಂಚುಗಳಷ್ಟು ರಸ್ತೆ ಅಗೆದು ಬಿಡಲಾಗಿತ್ತು. ರಸ್ತೆಯಲ್ಲಿ ವೇಗವಾಗಿ ಸಾಗುವಾಗ ಬೈಕ್ ಗಳು ನಿಯಂತ್ರಣ ತಪ್ಪಿ ಬೀಳುತ್ತಿವೆ.
ಒಂದೇ ದಿನಕ್ಕೆ 5ಕ್ಕೂ ಹೆಚ್ಚು ಬೈಕ್ಗಳು ಉರುಳಿ ಬಿದ್ದು, ಗಂಭೀರವಾಗಿ ಗಾಯಗೊಂಡ ಜನರನ್ನು ಇಲ್ಲಿಯ ಸರಕಾರಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಕಲಬುರ್ಗಿ ಹಾಗೂ ಮಹಾರಾಷ್ಟ್ರದ ಉಮ್ಮರ್ಗಾ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮುಂಬೈನಿಂದ ಹೈದರಾಬಾದ್ಗೆ ಸಂಪರ್ಕಿಸುವ ಚತುಷ್ಪಥ ರಸ್ತೆ ಇದಾಗಿದ್ದು, ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಕಳೆದ ವರ್ಷವೇ ಹೊಸದಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ, ರಸ್ತೆ ನಿರ್ಮಿಸಿದ ಒಂದೇ ವರ್ಷದಲ್ಲಿ ಮತ್ತೆ ರಿಪೇರಿ ಮಾಡಲೆಂದು ರಸ್ತೆ ಅಗೆದಿರುವುದು ಗಮನಿಸಿದರೆ ರಸ್ತೆ ಕಾಮಗಾರಿ ಗುಣಮಟ್ಟದಲ್ಲಿ ಅನುಮಾನ ಹುಟ್ಟಿಸುವಂತೆ ಮಾಡಿದೆ.
ರಸ್ತೆ ರಿಪೇರಿ ನಡೆಸುವ ಸ್ಥಳದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳು ಕೈಗೊಂಡಿಲ್ಲ. ಹೀಗಾಗಿ ಬೈಕ್ ಸವಾರರು ರಸ್ತೆ ಮೇಲೆ ಬಿದ್ದು ಕೈ ಕಾಲು ಮುರಿದುಕೊಳ್ಳುವ ಸ್ಥಿತಿ ಎದುರಾಗಿದೆ ಎಂದು ಸ್ಥಳೀಯರ ಆರೋಪವಾಗಿದೆ.