ಬೀದರ್:ಹದ್ದು ಮಿರಿ ಸದ್ದು ಮಾಡುತ್ತಿದ್ದ ಸಾಮಾಜಿಕ ಜಾಲತಾಣದ ಮೇಲೆ ಕೊನೆಗೂ ಚುನಾವಣೆ ಆಯೋಗ ಅಸ್ತ್ರ ಪ್ರಯೋಗಿಸಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ದೋಷ ಕಂಡ ಬಂದ ಹಿನ್ನೆಲೆಯಲ್ಲಿ 3 ಪ್ರತ್ಯೇಕ ಪ್ರಕರಣ ದಾಖಲಿಸಿದೆ. ಇದು 'ಈಟಿವಿ ಭಾರತ್' ನ ಫಲಶೃತಿ.
ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪೋಲಿಂಗ್ ಟ್ರೋಲ್ ಮಾಡುವ ಮೂಲಕ ಸಾರ್ವತ್ರಿಕ ಚುನಾವಣೆಯ ನಡುವೆ ಮತ್ತೊಂದು ಚುನಾವಣೆಯಂತೆ ಮತ ಹಾಕಿಸಿಕೊಳ್ಳುತ್ತಿದ್ದರು. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೆಲವರು ಮನಸ್ಸಿಗೆ ಬಂದಂತೆ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪಕ್ಷಗಳ ಕುರಿತು ಪ್ರಭಾವ ಬೀರುವ ನಿಟ್ಟಿನಲ್ಲಿ ಪ್ರಚಾರ ಮಾಡುತ್ತಿದ್ದರು. ಈ ಕುರಿತು 'ಈಟಿವಿ ಭಾರತ' 'ಎಲೆಕ್ಷನ್ ಅಖಾಡದಲ್ಲಿ ಹದ್ದು ಮೀರಿ ಸದ್ದು ಮಾಡ್ತಿದೆ ಸೋಶಿಯಲ್ ಮೀಡಿಯಾ ವಾರ್' ಎಂಬ ತಲೆಬರಹದ ಅಡಿಯಲ್ಲಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು.
ವರದಿ ಗಮನಿಸಿದ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಯಾಗಿರುವ ಡಾ.ಹೆಚ್.ಆರ್ ಮಹಾದೇವ್ ಅವರು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದ ಒಟ್ಟು ಮೂರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಅವರ ಮೇಲೆ ಹಣ ಹಂಚಿದ ಆರೋಪದಡಿ ಒಂದು ಪ್ರಕರಣ ದಾಖಲಿಸಲಾಗಿದೆ.
ಮತ್ತೊಂದೆಡೆ ಕಡೆ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರ ಶಿಕ್ಷಣ ಸಂಸ್ಥೆಗಳು ಹಾಗೂ ಸಹಕಾರಿ ಸಕ್ಕರೆ ಕಾರ್ಖಾನೆಗಳ ಸಿಬ್ಬಂದಿ ವಿರುದ್ಧ ದೂರು ಬಂದಿದೆ. ಹೀಗಾಗಿ ಆ ಸಿಬ್ಬಂದಿ ಮೇಲೆ ನಿಗಾ ಇಡಲು ಪ್ರತಿ ದಿನ ಸ್ಥಳೀಯ ವಲಯ ಚುನಾವಣಾಧಿಕಾರಿ ಬಳಿ ಹಾಜರಿ ಹಾಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.