ಬೀದರ್: ಮುಷ್ಕರ ಬಿಟ್ಟು ಸ್ವಯಂ ಪ್ರೇರಣೆಯಿಂದ ಸೇವೆಗೆ ಹಾಜರಾಗುವ ಸಾರಿಗೆ ಸಿಬ್ಬಂದಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಜಿಲ್ಲೆಯ ಹುಮನಾಬಾದ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಯಂಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು. ಈ ಸಂಬಂಧ ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು, ಬಡವರು, ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳು ಕಣ್ಣಿಗೆ ಕಾಣುತ್ತಿವೆ. ಜನ ಎಷ್ಟು ಪರಿತಪಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಮುಷ್ಕರದಿಂದ ಸಾರಿಗೆ ಸಂಸ್ಥೆಗೂ ನಷ್ಟವಾಗುತ್ತಿದೆ. ಸಾರಿಗೆ ಸಂಸ್ಥೆಗಳನ್ನು ಗಟ್ಟಿಗೊಳಿಸದೇ ಶಾಶ್ವತವಾಗಿ ನೌಕರರ ಹಿತ ಕಾಯುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಅರಿವಿದೆ. ಸಾರಿಗೆ ಸಂಸ್ಥೆಯು ಉಳಿಯಬೇಕು, ನೌಕರರಿಗೂ ಒಳ್ಳೆಯ ಸಂಬಳ ಸಿಗಬೇಕು. ಅದು ದುಡಿಮೆಯಿಂದ ಮಾತ್ರ ಸಾಧ್ಯ. ದುಡಿಮೆ ಇಲ್ಲದೆ ಅದು ಅಸಾಧ್ಯ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.