ಬೀದರ್ : ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಹಾಕಲಾದ ಲಾಕ್ಡೌನ್ನಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಬಾರದು. ರೈತರು ಮುಂಗಾರು ಹಂಗಾಮಿನ ಬಿತ್ತನೆ ತಯಾರಿ ಮಾಡಿಕೊಳ್ಳಲು ಅವಕಾಶವಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಡರಾತ್ರಿ ಸಭೆ ನಡೆಸಿದ ಅವರು, ರೈತರಿಗೆ ಮುಂಗಾರು ಹಂಗಾಮಿನ ಬಿತ್ತನೆಗೆ ಗೊಬ್ಬರ, ಬೀಜ ಖರೀದಿಗೆ ಅವಕಾಶವಿದೆ. ಸರ್ಕಾರ ಎಲ್ಲಾ ರೀತಿಯಲ್ಲೂ ರೈತರಿಗೆ ಸಹಕರಿಸಲಿದೆ ಎಂದು ಭರವಸೆ ನೀಡಿದರು.
ತರಕಾರಿ, ಹಣ್ಣು ಸಾಗಾಣಿಕೆ ಮಾಡಲಾಗದೆ ಬೆಳೆದ ಉತ್ಪನ್ನಗಳೆಲ್ಲವೂ ನಾಶ ಮಾಡಿರುವುದು ಗಮನಕ್ಕೆ ಬಂದಿದೆ. ರೈತರು ಕೃಷಿ ಉತ್ಪನ್ನಗಳನ್ನ ಮಾರುಕಟ್ಟೆಗೆ ಸಾಗಿಸಲು ಅವಕಾಶ ನೀಡಲಾಗಿದೆ. ಅಲ್ಲದೆ ಅಂತರರಾಜ್ಯ ಸಂಪರ್ಕ ಹೊಂದಿರುವ ಬೀದರ್ ಜಿಲ್ಲೆಯ ಎರಡು ಗಡಿ ಚೆಕ್ಪೋಸ್ಟ್ಗಳಲ್ಲಿ ಕೃಷಿ ಉತ್ಪನ್ನಕ್ಕೆ ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗಿದೆ ಎಂದರು.
ನಾವು ಲಾಕ್ಡೌನ್ನಿಂದ ಪಾರಾಗಬೇಕಿದೆ. ಇದೊಂದು ಸಾಮಾಜಿಕ ವಿಪತ್ತು, ಇದರೊಂದಿಗೆ ರೈತರ ಜೀವನ ಮಟ್ಟವು ಸುಧಾರಿಸಲು ಕ್ರಮಕೈಗೊಳ್ಳಬೇಕಿದೆ. ಅಲ್ಲದೇ ರೈತರಿಗೆ ಪರಿಹಾರ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ಪಾಟೀಲ್ ಹೇಳಿದರು.
ಸಭೆಯಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್, ಸಂಸದ ಭಗವಂತ ಖೂಬಾ, ಡಾ.ಉಮೇಶ ಜಾಧವ್, ಶಾಸಕರುಗಳಾದ ಬಂಡೆಪ್ಪ ಕಾಶೆಂಪೂರ್, ರಾಜಶೇಖರ್ ಪಾಟೀಲ್, ರಹೀಂಖಾನ್, ಬಿ.ನಾರಾಯಣ್ ರಾವ್, ಅರವಿಂದ ಅರಳಿ ಹಾಗೂ ಜಿಲ್ಲಾಧಿಕಾರಿ ಡಾ.ಹೆಚ್ ಆರ್ ಮಹದೇವ್ ಸೇರಿ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.