ಬೀದರ್: ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಹಾಗೂ ಜೇಮ್ಸ್ ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಇಂದು ಬೀದರ್ ನಗರದಲ್ಲಿ ಅದ್ಧೂರಿ ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಆಟೋಗಳಲ್ಲಿ ಪುನೀತ್ ರಾಜ್ಕುಮಾರ್ ಅವರ ಸಿನಿಮಾಗಳ ಬ್ಯಾನರ್, ಫೋಟೋ ಇಟ್ಟು ಸಾಗಲಾಯಿತು.
ಅಂಬೇಡ್ಕರ್ ವೃತ್ತದಿಂದ ಹಿಡಿದು ಸ್ವಪ್ನ ಮಲ್ಟಿಪ್ಲೆಕ್ಸ್ ವರೆಗೆ ಅಪ್ಪು ಅವರ ಸಿನಿಮಾ ಹಾಡುಗಳನ್ನು ಹಾಡುತ್ತ ಮೆರವಣಿಗೆ ಮಾಡಲಾಯಿತು. ನಂತರ ಮಲ್ಟಿಪ್ಲೆಕ್ಸ್ ಎದುರು ಅವರ ಕಟೌಟ್ಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿದರು.
ಸಿನಿಮಾ ಮಂದಿರದಲ್ಲಿ ಸ್ಕ್ರೀನ್ ಎದುರುಗಡೆ ಅಪ್ಪು ಅವರ ಫೋಟೋ ಹಿಡಿದು ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಜೇಮ್ಸ್ ಸಿನಿಮಾ ನೋಡಲು ಯುವಕರು, ಮಹಿಳೆಯರು ಸೇರಿದಂತೆ ಅಜ್ಜ-ಅಜ್ಜಿ ಸಮೇತ ಮೊದಲನೇ ಶೋ ನೋಡಲು ಬಂದಿದ್ದು ವಿಶೇಷ. ಸಾವಿರಾರು ಯುವಕರು ಥಿಯೇಟರ್ ಬಳಿ ಸೇರಿ ನೃತ್ಯ ಮಾಡಿ ಸಂತೋಷಪಟ್ಟರು. ಇವತ್ತಿನ ದಿನದ ಎಲ್ಲಾ ಟಿಕೆಟ್ಗಳು ಮಾರಾಟವಾಗಿವೆ ಎನ್ನುತ್ತಾರೆ ಇಲ್ಲಿನ ವ್ಯವಸ್ಥಾಪಕರು.
ಜೇಮ್ಸ್ ಖದರ್ಗೆ ಬಿಸಿಲೂರಿನ ಫ್ಯಾನ್ಸ್ ಫಿದಾ.. ಬಿಸಿಲೂರು ಕಲಬುರಗಿಯಲ್ಲಿ ಜೇಮ್ಸ್ ಜಾತ್ರೆಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ನಗರದ ಸಂಗಮ್, ತ್ರಿವೇಣಿ ಟಾಕೀಸ್ನಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಶೋ ಆರಂಭವಾಗಿದ್ದು, ಅಪ್ಪು ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ.
ಸಿನೆಮಾ ವೀಕ್ಷಣೆ ಮುನ್ನ ಬ್ಯಾನರ್ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು ಸಿನಿಮಾ ಶುರುವಾಗ್ತಿದ್ದಂತೆ ಪರದೆಯ ಬಳಿ ಹೋಗಿ ಸೆಲ್ಫಿ ತೆಗೆದುಕೊಂಡರು. ಇದೇ ವೇಳೆ ಅಪ್ಪು ಎಂಟ್ರಿ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು. ಚಿತ್ರ ಮುಗಿಸಿ ಹೊರಬಂದವರಿಗೆ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು.
ತಮಟೆ ಸದ್ದಿಗೆ ಸ್ಟೆಪ್ ಹಾಕಿದ ಅಭಿಮಾನಿಗಳು.. ಪುನೀತ್ ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆ ವೇಳೆ ಸಂಗಮ್ ಚಿತ್ರಮಂದಿರದ ಮುಂದೆ ತಮಟೆ ಸೌಂಡ್ಗೆ ಅಭಿಮಾನಿಗಳು ಸ್ಟೆಪ್ ಹಾಕಿದರು. ಮಂಗಳ ಮುಖಿಯರು ಸೇರಿದಂತೆ ಅಭಿಮಾನಿಗಳು, ಯುವಕರು ಚಿತ್ರಮಂದಿರದ ಮುಂದೆ ಅಪ್ಪು ಭಾವಚಿತ್ರ ಹಿಡಿದು ಸಖತ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ಅಪ್ಪು ಅಪ್ಪು ಅಂತಾ ಕೂಗಿ ಅಭಿಮಾನ ಮೆರೆದರು.
47 ಕೆಜಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ.. ಜೇಮ್ಸ್ ಚಿತ್ರ ಬಿಡುಗಡೆ ಹಾಗೂ ಅಪ್ಪು ಅವರ 47ನೇ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳು 47 ಕೆಜಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿದರು.
ಓದಿ: ಬೆಳ್ಳಿತೆರೆ ಮೇಲೆ ಅಪ್ಪು ನೋಡಿ ಭಾವುಕರಾದ ರಾಘಣ್ಣ, ಶ್ರೀಮುರಳಿ, ಯುವ ರಾಜ್ಕುಮಾರ್