ಬಸವಕಲ್ಯಾಣ: ಗ್ರಾ.ಪಂ ಸ್ಥಾನಗಳಿಗೆ ಜಾತಿ ಜನ ಸಂಖ್ಯೆ ಆಧಾರದ ಮೇಲೆ ಮೀಸಲು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಶರಣನಗರ ಗ್ರಾಮದ ಪ್ರಮುಖರ ನಿಯೋಗ ಇಲ್ಲಿನ ಮಿನಿ ವಿಧಾನಸೌಧಕ್ಕೆ ಆಗಮಿಸಿ, ಬೇಡಿಕೆ ಕುರಿತು ತಹಶೀಲ್ದಾರ್ ಸಂಗಯ್ಯ ಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮುಡಬಿ ಗ್ರಾ.ಪಂ ವ್ಯಾಪ್ತಿಯ ಶರಣ ನಗರ ಗ್ರಾಮದಲ್ಲಿ ಒಟ್ಟು ಜನ ಸಂಖ್ಯೆ 1,250 ಇದ್ದು, ಇದರಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ 700ರ ರಷ್ಟಿದೆ. ಮೂರು ಸ್ಥಾನಗಳಗೆ ಎಸ್‌ಸಿ ಮೀಸಲಾತಿ ಮತ್ತು 1 ಸ್ಥಾನಕ್ಕೆ ಒಬಿಸಿ ಮೀಸಲು ಕಲ್ಪಿಸಲಾಗಿದೆ. ಜಾತಿ ಮತ್ತು ಜನ ಸಂಖ್ಯೆ ಆಧಾರದಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲು ಕೈತಪ್ಪಿದಂತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಸಾಮಾನ್ಯ ವರ್ಗದ ಮಹಿಳೆ ಅಥವಾ ಪುರುಷ ಸ್ಥಾನಕ್ಕೆ ಅವಕಾಶ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದ್ದು, ಅವಕಾಶ ನೀಡದಿದ್ದರೆ ಬರುವ ಚುನಾವಣೆ ಬಹಿಷ್ಕರಿಸುವುದಾಗಿ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ರೇವಣಸಿದ್ದಪ್ಪ ಮಾನಕರೆ, ಶರಣಪ್ಪ ಸರಡಗಿ, ಘನಲಿಂಗಯ್ಯ ಸ್ವಾಮಿ, ಧನರಾಜ ಪಾಟೀಲ್, ಕವಿರಾಜ ಬಗದೂರೆ, ಸಿದ್ರಾಮಪ್ಪ ಸರಡಗಿ, ದೇವೇಂದ್ರಪ್ಪ ಸಂಗೋಳಗಿ, ವಿಜಯಕುಮಾರ ಸ್ವಾಮಿ, ಸೇರಿದಂತೆ ಇತರರು ನಿಯೋಗದಲ್ಲಿದ್ದರು.