ಬೀದರ್: ತೆಲಂಗಣದಿಂದ ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತ್ತಿದ್ದ ಜಾಲವೊಂದನ್ನು ಭೇದಿಸಿರುವ ಪೊಲೀಸರು ಬರೋಬ್ಬರಿ 456 ಕೆ.ಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲೆಯ ಹುಮನಾಬಾದ್ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಶಾಖಪಟ್ಟಣಂದಿಂದ ಮಹಾರಾಷ್ಟ್ರದ ಮುಂಬೈ ಮಹಾನಗರಕ್ಕೆ ಮೂರು ಕಾರುಗಳಲ್ಲಿ ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್ ನಾಗೇಶ್ ಮಾರ್ಗದರ್ಶನದಲ್ಲಿ, ಸಿಪಿಐ ಮಲ್ಲಿಕಾರ್ಜುನ ಯಾತನೂರ, ಹಾಗೂ ಪಿಎಸ್ ಐ ರವಿಕುಮಾರ್ ನಾಯ್ಕೊಡಿ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದರು.
ದಾಳಿ ವೇಳೆಯಲ್ಲಿ ಅಂದಾಜು 22.80 ಲಕ್ಷ ರುಪಾಯಿ ಮೌಲ್ಯದ 456 ಕೆ.ಜಿ ಗಾಂಜಾ, 9 ಲಕ್ಷ ಮೌಲ್ಯದ ಮೂರು ಕಾರುಗಳು, 10,250 ರುಪಾಯಿ ನಗದು ಜಪ್ತಿ ಮಾಡಿಕೊಂಡಿದ್ದಾರೆ. ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.