ಬಸವಕಲ್ಯಾಣ (ಬೀದರ್): ಕೆಲ ದಿನಗಳಿಂದ ಮಾಯವಾಗಿದ್ದ ಕೊರೊನಾ ಮತ್ತೆ ಅಟ್ಟಹಾಸ ಮೆರೆದಿದ್ದು, ಮಗಳ ಮುದುವೆಗೆಂದು ಮಹಾರಾಷ್ಟ್ರಕ್ಕೆ ಹೊಗಿ ಬಂದ ವ್ಯಕ್ತಿಯೊಬ್ಬ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ತಾಲೂಕಿನ ಘೋಟಾಳ ಗ್ರಾಮದ 55 ವರ್ಷದ ವ್ಯಕ್ತಿ ಕೊರೊನಾಗೆ ಪ್ರಾಣ ಕಳೆದುಕೊಂಡಿದ್ದು, ತಾಲೂಕಿನಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 2ಕ್ಕೆ ಏರಿದೆ.
ಕಳೆದ ಜೂನ್ 11 ರಂದು ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಸಾಂಗ್ವಿಯಲ್ಲಿ ನಡೆದ ತನ್ನ ಮಗಳ ಮದುವೆಯಲ್ಲಿ ಪಾಲ್ಗೊಂಡು ಬಂದಿದ್ದ ಈತನಿಗೆ, ಜೂನ್ 22 ರಂದು ತೀವ್ರ ಉಸಿರಾಟ ಸಮಸ್ಯೆ ಕಾಣಿಕೊಂಡಿತ್ತು. ತಕ್ಷಣ ಬಸವಕಲ್ಯಾಣ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ 23 ರಂದು ಕಲಬುರಗಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 24 ರಂದು ಕೊನೆಯುಸಿರೆಳೆದಿದ್ದಾನೆ ಎಂದು ಆರೋಗ್ಯ ಇಲಾಖೆ ಮೂಲಗಳು ಖಚಿತ ಪಡಿಸಿವೆ.
ಮೃತ ವ್ಯಕ್ತಿಗೆ ಪ್ರಥಮ ಸಂಪರ್ಕಕ್ಕೆ ಬಂದಿದ್ದ ಆತನ ಕುಟುಂಬದ ಸದಸ್ಯರು ಸೇರಿದಂತೆ 31 ಜನರು ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ 20ಕ್ಕೂ ಅಧಿಕ ಜನರನ್ನು ಹೊಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
164 ಜನ ಬಿಡುಗಡೆ: ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 195ಕ್ಕೆ ಏರಿದೆ. ಈ ಪೈಕಿ 164 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಉಳಿದವರು ಬೀದರ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.