ಬೀದರ್ : ನಗರದ ಓಲ್ಡ್ ಸಿಟಿಯ ಮನಿಯಾರ್ ತಾಲೀಮ್ನಲ್ಲಿ ಸುಸಜ್ಜಿತವಾಗಿ ನಿರ್ಮಿಸಿದ 100 ಹಾಸಿಗೆಯ ‘ತಾಯಿ ಹಾಗೂ ಮಗುವಿನ ಆರೈಕೆ’ ಆಸ್ಪತ್ರೆಯನ್ನು ಸಿಎಂ ಯಡಿಯೂರಪ್ಪ ಲೋಕಾರ್ಪಣೆ ಮಾಡಿದ್ದಾರೆ.
ಇಂದು ಬೆಳಗ್ಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ಬೀದರ್ಗೆ ಆಗಮಿಸಿದ ಸಿಎಂ ಬಿ ಎಸ್ ಯಡಿಯೂರಪ್ಪ, ಬಹು ನಿರೀಕ್ಷಿತ 100 ಹಾಸಿಗೆಯ ಆಸ್ಪತ್ರೆ ಉದ್ಘಾಟನೆ ಮಾಡಿ ಮಾತನಾಡಿದರು.
ದೇಶದಲ್ಲಿ ಹೆರಿಗೆ ನಂತರ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವಲ್ಲಿ ಕೇರಳ ಮೊದಲ ಸ್ಥಾನ, ಕರ್ನಾಟಕ 2ನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಆರೋಗ್ಯ ಸೇವೆ ವೃದ್ಧಿಸಲು ದಿಟ್ಟ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇದೇ ವೇಳೆಯಲ್ಲಿ ಬೀದರ್ ಹೊರ ವಲಯದ ಜಮಿಸ್ತಾಪೂರ್ನಲ್ಲಿ ನಿರ್ಗತಿಕ ಹಾಗೂ ಬಡ ಕುಟುಂಬಗಳಿಗಾಗಿ ನಿರ್ಮಾಣ ಮಾಡಲಾದ ವಸತಿ ಯೋಜನೆ ಅಡಿ ಸಾಂಕೇತಿಕವಾಗಿ 6 ಜನರಿಗೆ ಹಕ್ಕು ಪತ್ರಗಳನ್ನು ವಿತರಿಸಿದರು.
ವೇದಿಕೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಉಸ್ತುವಾರಿ ಸಚಿವ ಪ್ರಭು ಚೌಹಾಣ್, ಶಾಸಕ ರಹೀಂಖಾನ್, ಸಂಸದ ಭಗವಂತ ಖೂಬಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.