ಬಸವಕಲ್ಯಾಣ: ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಶುಕ್ರವಾರ ತಾಲೂಕಿನಲ್ಲಿ ಹೊಸದಾಗಿ 10 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಪ್ರಕರಣ ಇದೀಗ 131ಕ್ಕೆ ಏರಿಕೆಯಾಗಿದೆ.
ಮಧ್ಯಪ್ರದೇಶದಿಂದ ಬಂದಿರುವ ನಗರದ ವಡ್ಡರಗಲ್ಲಿಯ 55 ವರ್ಷದ ವ್ಯಕ್ತಿ ಹಾಗೂ ಮಹಾರಾಷ್ಟ್ರದಿಂದ ತವರಿಗೆ ಆಗಮಿಸಿದ ಘಾಟ್ ಹಿಪ್ಪರಗಾ ತಾಂಡಾದ 9 ಜನರಲ್ಲಿ ಸೋಂಕು ಇರುವುದು ಧೃಡಪಟ್ಟಿದೆ. ತಾಂಡಾದಲ್ಲಿ ಸೋಂಕಿಗೆ ಒಳಗಾದವರ ಪೈಕಿ ನಾಲ್ವರು ಮಹಿಳೆಯರಾಗಿದ್ದು, 5 ಜನ ಪುರುಷರಾಗಿದ್ದಾರೆ. 4 ವರ್ಷದ ಓರ್ವ ಬಾಲಕ, ಓರ್ವ ಬಾಲಕಿ ಹಾಗೂ 7 ವರ್ಷದ ಬಾಲಕನಿಗೂ ಮಹಾಮಾರಿ ವಕ್ಕರಿಸಿದೆ.
ಗುರುವಾರ 13 ಜನರಿಗೆ ವಕ್ಕರಿಸಿದ್ದ ಸೋಂಕು, ಶುಕ್ರವಾರ ಮತ್ತೆ 10 ಜನರಲ್ಲಿ ಕಾಣಿಸಿಕೊಂಡಿದೆ. ತಾಲೂಕಿನಲ್ಲಿ ಇದುವರೆಗೆ ಸೋಂಕು ಪತ್ತೆಯಾದ 131 ಜನರ ಪೈಕಿ 33ಕ್ಕೂ ಅಧಿಕ ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ನಗರದಲ್ಲಿ ಮೂರು ದಿನದಲ್ಲಿ 5 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಮನೆಗೆ ಬಂದವರಲ್ಲಿ ಸೋಂಕು ಪತ್ತೆಯಾಗಿರುವ ಕಾರಣ ಇವರ ಸಂಪರ್ಕಕ್ಕೆ ಬಂದವರೆಷ್ಟು.? ಇನ್ನೆಷ್ಟು ಜನರಿಗೆ ಸೋಂಕು ಹರಡಿದೆ ಎನ್ನುವ ಭೀತಿ ಜನರಲ್ಲಿ ಕಾಡುತ್ತಿದೆ.