ಬಳ್ಳಾರಿ: ಕಚೇರಿಯಲ್ಲಿ ಬಿ, ಸಿ, ಡಿ ಶ್ರೇಣಿಯ ಸಿಬ್ಬಂದಿ ಮೇಲಿನ ಆಡಳಿತ ಮಂಡಳಿಯ ದಬ್ಬಾಳಿಕೆ ವಿರೋಧಿಸಿ ಹಾಗೂ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಭವಿಷ್ಯ ನಿಧಿ ಕಾರ್ಮಿಕರ ಒಕ್ಕೂಟದ ಪದಾಧಿಕಾರಿಗಳು ಬುಧವಾರ ನಗರದ ಭವಿಷ್ಯ ನಿಧಿ ಕಚೇರಿ ಎದುರು ಮುಷ್ಕರ ನಡೆಸಿದ್ರು.
ಒಕ್ಕೂಟದ ಉಪಾಧ್ಯಕ್ಷ ಕೆ. ಶ್ರೀಧರ್ ಶಾಸ್ತ್ರೀ ಮಾತನಾಡಿ, ಬಹಳ ವರ್ಷಗಳಿಂದ ಹೊಸ ನೇಮಕಾತಿ ಮಾಡಿಕೊಂಡಿಲ್ಲ. ಜತೆಗಿರುವ ಸಿಬ್ಬಂದಿ ಪದೋನ್ನತಿಯಾಗಿಲ್ಲ. 7ನೇ ವೇತನ ಆಯೋಗದಲ್ಲಿ ಬಿ, ಸಿ, ಡಿ ಶ್ರೇಣಿಯ ಸಿಬ್ಬಂದಿಗೆ ಅನ್ಯಾಯ ಮಾಡಲಾಗಿದೆ. ಇದನ್ನು ಸರಿಪಡಿಸುವಂತೆ ಕೋರಿದರೂ ಕೇವಲ ‘ಎ’ ಶ್ರೇಣಿಯವರ ವೇತನ ಸರಿ ಮಾಡಿಕೊಂಡಿದ್ದಾರೆ. ಕೆಳದರ್ಜೆಯ ನೌಕರರನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಕಾರ್ಯದರ್ಶಿ ಹೆಚ್. ಶಫಿ ಅಹ್ಮದ್ ಮಾತನಾಡಿ, ಶೀಘ್ರವಾಗಿ ನೇಮಕಾತಿ ನಿಯಮ ರೂಪಿಸಿ, ಕೆಲಸದ ಒತ್ತಡಕ್ಕೆ ಅನುಗುಣವಾಗಿ ಸಿಬ್ಬಂದಿ ಶೀಘ್ರವಾಗಿ ನೇಮಕಾತಿ ಮಾಡಿಕೊಳ್ಳಬೇಕು ವರ್ಗಾವಣೆ ನೀತಿ ಸರಿಪಡಿಸಬೇಕು. ಬಿ, ಸಿ, ಡಿ ಶ್ರೇಣಿಯ ಸಿಬ್ಬಂದಿ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡಬೇಕು. ದಬ್ಬಾಳಿಕೆ ನಡೆಯದಂತೆ ಅವರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಮಯದಲ್ಲಿ ಸಹಕಾರ್ಯದರ್ಶಿ ಪಿ.ಎಸ್. ಮಾರುತಿ, ಖಜಾಂಚಿ ಸಿಂದೋಗಿ ಗಿರಿ, ಸಮಿತಿಯ ಸದಸ್ಯರಾದ ಎ.ಮಲ್ಲಿಕಾರ್ಜುನ, ಎಸ್.ಶಫಿ, ಪಿ.ಜಾನ್ ಪೀಟರ್, ಎಂ. ಅಂಬರ್ನಾಥ ಉಪಸ್ಥಿತರಿದ್ದರು.