ಹೊಸಪೇಟೆ : ತಾಲೂಕಿನಲ್ಲೀಗ ಬಹುತೇಕ ಮುಖ್ಯ ಇಲಾಖೆಯ ಕಚೇರಿಗಳಲ್ಲಿ ಮಹಿಳಾ ಅಧಿಕಾರಿಗಳೇ ಕಾಣಸಿಗ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿ, ಕೃಷಿ ಸಹಾಯಕ ನಿರ್ದೇಶಕರು, ನಗರಸಭೆ ಪೌರಾಯುಕ್ತ ಹಾಗೂ ಸರ್ಕಾರದ ಅಧೀನದಲ್ಲಿರುವ ಬಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಥಾನಗಳಲ್ಲೀಗ ಪುರುಷರ ಬದಲು ಮಹಿಳಾ ಅಧಿಕಾರಿಗಳೇ ಬಂದಿದ್ದಾರೆ.
ಪಿ. ಸುನಂದಾ ಅವರು 2020 ಜುಲೈ 22ರಿಂದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದಾರೆ. ಈ ಮೊದಲು ಅವರು ಬಳ್ಳಾರಿ ಡಯಟ್ ಹಿರಿಯ ಉಪನ್ಯಾಸಕರಾಗಿದ್ದರು. ಎಲ್ ಡಿ ಜೋಷಿ ಅವರು ಬಿಇಒ ಆಗಿ ಎರಡು ವರ್ಷ 8 ತಿಂಗಳು ಕಾರ್ಯನಿರ್ವಹಿಸಿದ್ದರು. ಇದೀಗ ಅವರು ಡಯಟ್ನಲ್ಲಿ ಹಿರಿಯ ಉಪನ್ಯಾಸಕರಾಗಿದ್ದಾರೆ. ಈ ಸ್ಥಾನ ಅದಲು ಬದಲಾಗಿವೆ.
ನಾಗರತ್ನ ಹುಲಿಕೋಟೆ ಅವರು 2020 ಜುಲೈ 24ರಂದು ಹೊಸಪೇಟೆ ಕೃಷಿ ಸಹಾಯಕ ನಿರ್ದೇಶಕಿಯಾಗಿ ಅಧಿಕಾರಿ ವಹಿಸಿಕೊಂಸಿದ್ದಾರೆ. ಕೆ. ವಾಮದೇವ ಕೊಳ್ಳಿ ಅವರು ಅಧಿಕಾರ ಹಸ್ತಾಂತರ ಮಾಡಿದ್ದಾರೆ. ನಾಗರತ್ನ ಹುಲಿಕೋಟೆ ಅವರು ಈ ಮುಂಚೆ ಕೊಪ್ಪಳ ಜೆಡಿಯು ಕಚೇರಿಯಲ್ಲಿ ಸಹಾಯಕ ಕೃಷಿ ನಿರ್ದೇಶಕಿಯಾಗಿದ್ದರು.
ನಗರದ ಬಿಡಿಸಿಸಿನ ಕೇಂದ್ರ ಕಚೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಶ್ರೀ ಜೂನ್ 11ರಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ಮುಂಚೆ ಕೂಡಲಸಂಗಮದ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಮುಂಚೆ ಇದ್ದ ಅಧಿಕಾರ ವಹಿಸಿಕೊಂಡಿದ್ದ ಕುಬೇರಪ್ಪ ಅವರು ವಯೋಸಹಜ ನಿವೃತ್ತಿ ಪಡೆದುಕೊಂಡಿದ್ದರು. ಅವರ ಸ್ಥಾನಕ್ಕೆ ರಾಜಶ್ರೀ ಅವರು ಬಂದಿದ್ದಾರೆ.
ಜಯಲಕ್ಷ್ಮಿ 2019 ಆಗಸ್ಟ್ 23ರಲ್ಲಿ ಹೊಸಪೇಟೆ ನಗರಸಭೆಯ ಪೌರಾಯುಕ್ತೆಯಾಗಿ ಅಧಿಕಾರ ವಹಿಸಿಕೊಂಡರು. ಮುಂಚೆ ಈ ಸ್ಥಾನಕ್ಕೆ ವಿ.ರಮೇಶ್ ಅವರು ಕಾರ್ಯ ನಿರ್ವವಹಿಸಿದ್ದರು. ಜಯಲಕ್ಷ್ಮಿ ಅವರು ಈ ಮುಂಚೆ ರಾಯಚೂರು ಜಿಪಂ ಸಹಾಯಕ ಕಾರ್ಯದರ್ಶಿಯಾಗಿದ್ದರು.
ವರ್ಗಾವಣೆಯಲ್ಲಿ ಹಸ್ತಕ್ಷೇಪ : ಪ್ರಮುಖ ಇಲಾಖೆಗಳಲ್ಲಿ ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ಮಹಿಳಾ ಅಧಿಕಾರಿಗಳನ್ನು ನೇಮಿಸಿಸಲು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ. ಸಚಿವರ ಇಚ್ಛೆಗೆ ಅನುಗುಣವಾಗಿ ಅಧಿಕಾರ ನಡೆಸಲು ಮಹಿಳಾ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಆದರೆ, ಈ ಆರೋಪಿಗಳಿಗೆ ಸಂಬಂಧಿಸಿದಂತೆ ಸಚಿವ ಆನಂದ್ ಸಿಂಗ್ ಸಂಪರ್ಕಿಸಲು ಯತ್ನಿಸಿದ್ರೂ, ಅವರು ದೂರವಾಣಿ ಸಂಪರ್ಕಕ್ಕೆ ಸಿಕ್ಕಿಲ್ಲ.
ಆದರೆ, ಇದೇನೆ ಇರಲಿ. ಮಹಿಳಾ ಅಧಿಕಾರಿಗಳೂ ಯಾವುದೇ ಸ್ಥಾನ ನೀಡಿದ್ರೂ ಸಮರ್ಥವಾಗಿ ನಿಭಾಯಿಸಬಲ್ಲರು. ಹಾಗಾಗಿ, ಮಹಿಳಾ ಅಧಿಕಾರಿಗಳು ಅನ್ನೋದಕ್ಕಿಂತ ಅವರ ಕಾರ್ಯಕ್ಷಮತೆ ಸರಿಯಾಗಿದ್ರೇ ತಪ್ಪೇನು?..