ಬಳ್ಳಾರಿ: ವಿಮ್ಸ್ ಲ್ಯಾಬ್ ಟೆಕ್ನಿಷಿಯನ್ ವಿ ಕೆ ಯಾದವಾಡ ಅವರ ಮೇಲೆ ಜೂನ್ 12ರಂದು ರಾತ್ರಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆಯ (ಸೋಮವಾರ) ದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಅವರಿಗೆ ಕೌಲ್ ಬಜಾರ್ ಠಾಣೆಯ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಲ್ಯಾಬ್ ಟೆಕ್ನಿಷಿಯನ್ ಯಾದವಾಡ ಅವರ ಮೇಲಿನ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ, ರಾಜಶೇಖರ ಮುಲಾಲಿಯವರೇ ಈ ಹಲ್ಲೆ ಪ್ರಕರಣಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದಕ್ಕೆ ಪೂರಕವಾದ ಕೆಲ ಸಾಕ್ಷಿಗಳು ಕೂಡ ಕೌಲ್ ಬಜಾರ್ ಠಾಣೆಯ ಪೊಲೀಸರಿಗೆ ದೊರೆತಿವೆಯಂತೆ. ಹೀಗಾಗಿ, ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿಯವರಿಗೆ ನೋಟಿಸ್ ಜಾರಿ ಗೊಳಿಸಲಾಗಿದೆ. ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಲಕ್ಷ್ಮಣ ಬಿ ನಿಂಬರಗಿ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯಿಂದ ನೋಟಿಸ್ ಪಡೆದ ಮೊದಲನೇ ಆರೋಪಿ ಎಂಬ ಕುಖ್ಯಾತಿ ರಾಜಶೇಖರ ಮುಲಾಲಿಯವರದಾಗಿದೆ. ಲ್ಯಾಬ್ ಟೆಕ್ನಿಷಿಯನ್ ಯಾದವಾಡ ಅವರ ದೂರಿನ ಮೇರೆಗೆ ಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಹೆಚ್.ಆರ್.ರಂಗನಾಥ, ಜಿಲ್ಲಾ ವರದಿಗಾರ ವೀರೇಶ ದಾನಿ, ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ, ವಿಮ್ಸ್‌ನ ವೈದ್ಯರಾದ ಡಾ.ರವಿ ಭೀಮಪ್ಪ, ಡಾ. ಶಡ್ರಕ್, ಶುಶ್ರೂಕ ವಿಭಾಗದ ನೌಕರ ಹನುಮಂತ ರಾಯ ಹಾಗೂ ಉಷಾ ಎಂಬುವರ ಮೇಲೆ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯಾದವಾಡ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿ ಉಷಾ ಎಂಬುವರು ಮಹಿಳಾ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದರು.
ನೌಕರಿಯ ಆಮಿಷ :
ಯಾದವಾಡ ಅವರ ಮೇಲಿನ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವ ಕೆಲ ಆರೋಪಿಗಳಿಗೆ ವಿಮ್ಸ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಡಿ ನೌಕರಿ ಕೊಡಿಸುವುದಾಗಿ ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿಯವರು ಆಮಿಷವೊಡ್ಡಿದ್ದರು ಎಂಬ ದೂರುಗಳು ಕೇಳಿಬಂದಿವೆ.