ಹೊಸಪೇಟೆ: ಸರ್ಕಾರಿ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ನೀಡಲು ಯಾಕೆ ಸಾಧ್ಯವಾಗುತ್ತಿಲ್ಲ. ಖಾಸಗಿ ಶಾಲೆಗಳಲ್ಲಿ ಇದು ಹೇಗೆ ಸಾಧ್ಯವಾಗುತ್ತದೆ. ತಾಲೂಕಿನಲ್ಲಿ ಎಷ್ಟು ಸರ್ಕಾರಿ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಕುರುಬರ ಗಾದಿಲಿಂಗಪ್ಪ ಪ್ರಶ್ನಿಸಿದ್ದಾರೆ.
ತಾಲೂಕು ಪಂಚಾಯಿತಿಯಲ್ಲಿ ನಡೆದ 20ನೇ ಸಾಮಾನ್ಯ ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯರು ಅಧಿಕಾರಿಗಳ ಮುಂದೆ ಇಂತಹ ಪ್ರಶ್ನೆಗಳನ್ನು ಇಟ್ಟರು. ಸದಸ್ಯರಾದ ಮಲ್ಲೆ ಹನುಮಕ್ಕ ಹಾಗೂ ಜೋಗದ ನೀಲಮ್ಮ ಕೂಡಾ ಈ ಪ್ರಶ್ನೆಗೆ ಬೆಂಬಲ ನೀಡಿದರು.
ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಅವಶ್ಯಕತೆ ಇದೆ. ಇದರಿಂದ ಮಾತ್ರ ಈ ಭಾಗದ ಶೈಕ್ಷಣಿಕ ಗುಣಮಟ್ಟ ಮತ್ತು ಫಲಿತಾಂಶ ಉನ್ನತಿ ಸಾಧಿಸಲು ಸಾಧ್ಯ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ ಹಾಗೂ ಇಒ ಶ್ರೀಕುಮಾರ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಇಒ ಸುನಂದಾ, ಶಾಲೆಗಳ ಫಲಿತಾಂಶದ ಮಾಹಿತಿ ಸದ್ಯ ನನ್ನ ಬಳಿ ಇಲ್ಲ. ಕಾರಿನಲ್ಲಿ ಇಟ್ಟಿದ್ದೇನೆ. ಸ್ವಲ್ಪ ಸಮಯದ ಬಳಿಕ ಸಭೆಗೆ ಪ್ರಸ್ತುತ ಪಡಿಸಲಾಗುವುದು ಎಂದು ಹಾರಿಕೆ ಉತ್ತರ ನೀಡಿದರು.
ಅನುಪಾಲನಾ ವರದಿಯು ಹೊಸಪೇಟೆ ಹಾಗೂ ಕಂಪ್ಲಿ ತಾಲೂಕಿಗೆ ಒಳಗೊಂಡಿದ್ದು, ಹೊಸಪೇಟೆ ತಾಲೂಕಿನ ಮಾಹಿತಿಯನ್ನು ಪ್ರತ್ಯೇಕವಾಗಿ ನೀಡಬೇಕು. ಅಧಿಕಾರಿಗಳು ಮಾಹಿತಿಯನ್ನು ಮರೆಮಾಚಲು ಹೀಗೆ ಮಾಡುತ್ತಿದ್ದಾರೆ ಎಂದು ಕೆಲ ಸದಸ್ಯರು ಅಧಿಕಾರಿಗಳ ಉತ್ತರಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಟಿಪಿ ಸದಸ್ಯ ರಾಜಪ್ಪ ಮಾತನಾಡಿ, ಕೊರೊನಾದಿಂದ ಶಾಲೆಗೆ ವಿದ್ಯಾರ್ಥಿಗಳು ಬರದಂತಹ ವಾತಾವರಣವಿದೆ. ಅದರ ಭಯ ಹೋಗಲಾಡಿಸುವ ಪ್ರಯತ್ನವಾಗಬೇಕು. ಈ ಬಾರಿಯ ಶೈಕ್ಷಣಿಕ ವರ್ಷವನ್ನು ಶೂನ್ಯ ಶಿಕ್ಷಣ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು. ಅವಶ್ಯಕತೆಗೆ ತಕ್ಕಂತೆ ರೈತರಿಗೆ ಯೂರಿಯಾ ಸಿಗುತ್ತಿಲ್ಲ. ಇದುವರೆಗೂ ರೈತರಿಗೆ ಸಿಗಬೇಕಾದ ತಾಡಪಾಲ್ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಅಧಿಕಾರಿ ರೂಪಾ ಪ್ರತಿಕ್ರಿಯಿಸಿ, ಒಂದು ವಾರದವರೆಗೆ ಯೂರಿಯಾ ಸಮಸ್ಯೆ ಉಂಟಾಗಿತ್ತು. ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ.ಡಿ.ಭಾಸ್ಕರ ಮಾತನಾಡಿ, ಈವರೆಗೂ 5,400 ಕೊರೊನಾ ಪ್ರಕರಣಗಳು ತಾಲೂಕಿನಲ್ಲಿ ಪತ್ತೆಯಾಗಿವೆ. ಈ ಪೈಕಿ 60 ಜನ ಮೃತಪಟ್ಟಿದ್ದಾರೆ. 83 ಜನರನ್ನು ಹೋಂ ಐಸೋಲೇಷನ್ನಲ್ಲಿ ಇರಿಸಲಾಗಿದೆ. 120 ಹಾಸಿಗೆ ಹಾಗೂ 3 ವೆಂಟಿಲೇಟರ್ ಸೌಲಭ್ಯವಿದೆ ಎಂದು ಮಾಹಿತಿ ನೀಡಿದರು.
ಲೋಕೋಪಯೋಗಿ ಇಲಾಖೆಯ ಅಧಿಕಾರಿ ಕಿಶೋರ ಕುಮಾರ, ತೋಟಗಾರಿಕೆ ಇಲಾಖೆಯ ಅಧಿಕಾರಿ ರಾಜೇಂದ್ರ, ಸಿಡಿಪಿಒ ಅಮರೇಶ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ವರದಿ ನೀಡಿದರು.