ಬಳ್ಳಾರಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತ ಬೆಳೆಗಳನ್ನು ಸಂರಕ್ಷಿಸಲು ಭದ್ರಾ ಜಲಾಶಯದಿಂದ ಭದ್ರಾ ನದಿಗೆ ಸುಮಾರು 1.60 ಟಿಎಂಸಿ ನೀರನ್ನು ಹರಿಸಲಾಗುವುದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಎಂ.ಚಂದ್ರಹಾಸ ತಿಳಿಸಿದ್ದಾರೆ.
ಮಾ.18 ರಿಂದ ಏ.01ರವರೆಗೆ ನಿತ್ಯ 1,200 ಕ್ಯೂಸೆಕ್ನಂತೆ ನೀರು ಹರಿಸಲಾಗುವುದು. ಆದ್ದರಿಂದ ನದಿ ಪಾತ್ರದಲ್ಲಿರುವ ಸಾರ್ವಜನಿಕರು ತಿರುಗಾಡುವುದಾಗಲಿ, ದನಕರುಗಳನ್ನು ನದಿಗೆ ಇಳಿಸುವುದಾಗಲಿ ಇತ್ಯಾದಿ ಚಟುವಟಿಕೆಗಳಿಗಾಗಿ ನದಿಗೆ ಇಳಿಯದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.
ರೈತರು ಮೇಲೆ ತಿಳಿಸಿದ ಅವಧಿಯಲ್ಲಿ ನದಿ ದಂಡೆಗೆ ಅಳವಡಿಸಿರುವ ಪಂಪ್‍ಸೆಟ್‍ಗಳಿಂದ ಅಕ್ರಮವಾಗಿ ನೀರೆತ್ತುವುದನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.