ಬಳ್ಳಾರಿ: ಇಲ್ಲಿನ ಟ್ರಾಮಾ ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ತಮ್ಮ ವಿರುದ್ಧ ಮಾಡಿರುವ ಆರೋಪ ಕುರಿತಂತೆ ಪ್ರತಿಕ್ರಿಯಿಸಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ನಿರ್ದೇಶಕ ಗಂಗಾಧರಗೌಡ, ಇದರಲ್ಲಿ ಯಾವುದೇ ಸತ್ಯಾಸತ್ಯತೆ ಇಲ್ಲ. ಕಾನೂನು ಪ್ರಕಾರ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ನಾನು ಪೊಲೀಸ್ ತನಿಖೆಗೆ ಸಂಪೂರ್ಣ ಸಹಕರಿಸಲು ಸಿದ್ಧ ಎಂದು ತಿಳಿಸಿದ್ದಾರೆ. ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿತ್ತು.
ದುರುದ್ದೇಶಪೂರಿತ ದೂರು ಎಂದ ನಿರ್ದೇಶಕರು: 'ಟ್ರಾಮಾ ಕೇರ್ ಡೇಟಾ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ (ಹೊರಗುತ್ತಿಗೆ ನೌಕರರು) ಮಹಿಳೆಯರಿಬ್ಬರ ನಡುವೆ ಕಿತ್ತಾಡಿ ನಡೆದು, ಗಲಾಟೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ನೇಮಕ ಮಾಡಿಕೊಳ್ಳದಂತೆ ಸೂಚಿಸಲಾಗಿತ್ತು. ಈ ಕಾರಣಕ್ಕೆ ದುರುದ್ದೇಶದಿಂದ ತಮ್ಮ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ' ಎಂದು ವಿಮ್ಸ್ ನಿರ್ದೇಶಕ ಗಂಗಾಧರಗೌಡ ಹೇಳಿದ್ದಾರೆ.
ಆರೋಪವೇನು?: ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆ ವಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ ಸೇರಿ ಮೂವರ ವಿರುದ್ಧ ದೂರು ದಾಖಲಾಗಿದೆ. ವಿಮ್ಸ್ ಆಸ್ಪತ್ರೆಯ ಟ್ರಾಮಾ ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನೇಮಕಾತಿ ಆದೇಶ ಪ್ರತಿ ನೀಡುವಂತೆ ನಿರ್ದೇಶಕರ ಕಚೇರಿಗೆ ಹೋಗಿದ್ದ ವೇಳೆ ಕಿರುಕುಳ ನೀಡಿರುವುದಾಗಿ ಮಹಿಳೆ ದೂರಿನಲ್ಲಿ ದಾಖಲಿಸಿದ್ದಾರೆ. ಅಲ್ಲದೆ, ಟ್ರಾಮಾಕೇರ್ ಸೂಪರಿಂಡೆಂಟ್ ಡಾ. ಶಿವು ನಾಯ್ಕ ಹಾಗೂ ಟ್ರಾಮಾ ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಮಹಿಳೆ ವಿರುದ್ಧವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ನವೆಂಬರ್ 27ರಂದು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.