ಬಳ್ಳಾರಿ: ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕಿನ ಕಾರ್ಖಾನೆಯಲ್ಲಿ ಕೊರೊನಾ ಸೋಂಕು ಹೆಚ್ಚಳಗೊಂಡಿದ್ದು ಕುಡಿತಿನಿ ಪಟ್ಟಣದ ಜನರು ಸ್ವಯಂಘೋಷಿತ ಲಾಕ್ಡೌನ್ಗೆ ನಿರ್ಧರಿಸಿದ್ದಾರೆ.
ಪಟ್ಟಣದ ಮುಖಂಡರು ಒಂದೆಡೆ ಸೇರಿ ಈ ದಿನದಿಂದಲೇ ಸ್ವಯಂಪ್ರೇರಿತವಾಗಿ ಪಟ್ಟಣವನ್ನು ಲಾಕ್ಡೌನ್ ಮಾಡಲು ಪಟ್ಟಣದ ಜನರು ನಿರ್ಧರಿಸಿದ್ದು, ಕೆಲವು ನಿಯಮಗಳನ್ನು ರಚಿಸಿಕೊಂಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾನೂನಿನ ನಿಯಮಗಳೇನೇ ಇರಲಿ, ಅವುಗಳು ನಮಗೆ ಅನ್ವಯಿಸುವುದಿಲ್ಲ. ಮಹಾಮಾರಿ ಕೊರೊನಾ ಸೋಂಕು ನಮ್ಮ ಪಟ್ಟಣದೊಳಗೆ ನುಸುಳದಂತೆ ನೋಡಿಕೊಳ್ಳಬೇಕಿದೆ. ಹೀಗಾಗಿ, ಕುಡುತಿನಿ ಪಟ್ಟಣದ ಜನರು ಒಗ್ಗೂಡಬೇಕಿದೆ ಎಂದು ಪಟ್ಟಣದ ಮುಖಂಡರು ಕರೆ ಕೊಟ್ಟಿದ್ದಾರೆ.
'ಯಾರನ್ನೂ ಊರೊಳಗೆ ಬಿಟ್ಟುಕೊಳ್ಳಬೇಡಿ':
ಇನ್ನೊಂದು ವಾರ ಯಾರೂ ಎಲ್ಲಿಗೂ ಹೋಗಬೇಡಿ. ಯಾರನ್ನೂ ಊರೊಳಗೆ ಬಿಟ್ಟುಕೊಳ್ಳಬೇಡಿ. ಬಸ್, ಕಾರು, ಲಾರಿ, ಬೈಕ್ ಏನೇ ಬಂದ್ರೂ ನಮ್ಮೂರಲ್ಲಿ ನಿಲ್ಲಿಸುವುದಕ್ಕೆ ಅವಕಾಶವಿಲ್ಲ. ಅಗತ್ಯಬಿದ್ದರೆ ರಸ್ತೆಯನ್ನೇ ಬಂದ್ ಮಾಡೋಣ. ಈ ಊರು ನಮ್ಮದು, ಇದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದು. ಇದನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದವರಿಗೆ ಶಾಶ್ವತವಾಗಿ ಊರಿಂದಲೇ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದ್ದಾರೆ.