ಬಳ್ಳಾರಿ : ವಿಜಯನಗರ ಜಿಲ್ಲೆಯನ್ನಾಗಿಸುವ ಪ್ರಬಲ ಬೇಡಿಕೆಯನ್ನೇ ಮುಂದಿಟ್ಟುಕೊಂಡು ಪರ-ವಿರೋಧಾಭಿಪ್ರಾಯ ಎದುರಿಸುತ್ತಿರುವ ಅನರ್ಹ ಶಾಸಕ ಆನಂದಸಿಂಗ್ ಅವರಿಗೆ ಬಿಜೆಪಿಯಿಂದ ಉಪಚುನಾವಣೆ ಟಿಕೆಟ್ ನೀಡುವ ಸಲುವಾಗಿ ಮಾಜಿ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನವನ್ನು ಹಂಚಿಕೆ ಮಾಡಿ ಸಮಾಧಾನಪಡಿಸಲು ಬಿಜೆಪಿ ಸರ್ಕಾರ ಮುಂದಾಗಿದೆ.
ಆದರೆ, ವಿಜಯನಗರ ಕ್ಷೇತ್ರದ ಹಾಲಿ ಬಿಜೆಪಿ ಮುಖಂಡ, ಮಾಜಿ ಶಾಸಕ ಹೆಚ್. ಆರ್. ಗವಿಯಪ್ಪ ಸುತಾರಾಂ ಒಪ್ಪುತ್ತಿಲ್ಲ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. ಉಪಚುನಾವಣೆ ಟಿಕೇಟ್ ಬೇಕೆಂದು ಪ್ರಬಲವಾದ ಬೇಡಿಕೆಯನ್ನಿಟ್ಟಿದ್ದಾರೆ. ಅದರಿಂದ ರಾಜ್ಯ ಬಿಜೆಪಿಗೆ ಇದು ತೀವ್ರ ತಲೆನೋವಾಗಿ ಪರಿಣಮಿಸಿದೆ.
ಬಿಜೆಪಿಯಲ್ಲಿನ ಬಂಡಾಯ ಶಮನಕ್ಕೆ ಗವಿಯಪ್ಪ ಅವರಿಗೆ ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಆದರೆ, ಅದನ್ನ ಒಪ್ಪೋದಕ್ಕೆ ಗವಿಯಪ್ಪ ರೆಡಿಯಾಗಿಲ್ಲ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಒಪ್ಪೋದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಉಪಚುನಾವಣೆಯಲಿ ನನಗೂ ಟಿಕೇಟ್ ಕೊಡ್ತಾರೆ ಅಂತಾ ವಿಶ್ವಾಸ ಇದೆ. ಹೀಗಾಗಿ ಕಾದು ನೋಡುವೆ ಎಂದಿದ್ದಾರೆ ಗವಿಯಪ್ಪ.
ಅಧಿವೇಶನ ಮುಗಿಯುವವರೆಗೂ ಸುಮ್ಮನಿರುವೆ. ನಂತರ ವರಿಷ್ಠರ ಜೊತೆ ಮಾತನಾಡುವೆ. ಆನಂದ್ ಸಿಂಗ್ ಅವರ ಪ್ರಯತ್ನ ಅವರು ಮಾಡಲಿ ನಮ್ಮ ಪ್ರಯತ್ನ ನಾನು ಮಾಡ್ತೀನಿ. ಟಿಕೆಟ್ ಪಡೆಯಲು ಹೋರಾಡುವೆ ಎಂದಿದ್ದಾರೆ. ಮಗ ಗುರುದತ್ತ ಕೂಡ ಸಾಥ್ ನೀಡಿದ್ದು ನಿಗಮಗಿರಿ ಬೇಡವೆಂದಿದ್ದಾರೆ. ಬರುವ ಉಪಚುನಾವಣೆಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಅನಗತ್ಯವಾಗಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಸೋದು ಬೇಡ. ಕಳೆದಬಾರಿ ಅಲ್ಪ ಮತಗಳಿಂದ ಪರಾಜಿತರಾಗಿದ್ದೆವು. ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ಖಚಿತ ಎಂದು ಗುರುದತ್ತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ಹೆಚ್. ಆರ್ ಗವಿಯಪ್ಪ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 8228 ಮತಗಳಿಂದ ಸಿಂಗ್ ವಿರುದ್ದ ಸೋತಿದ್ದರು. ಈಗಾಗಲೇ ಸಿಂಗ್ ವಿರುದ್ದ ಎರಡು ಬಾರಿ ಸೋತಿರುವ ಅನುಕಂಪವಿದೆ. ಕಳೆದಬಾರಿ ಗವಿಯಪ್ಪರನ್ನ ಹಾಲಿ ಸಚಿವ ಬಿ. ಶ್ರೀರಾಮುಲು ಕಾಂಗ್ರೆಸ್ ನಿಂದ ಕರೆ ತಂದಿದ್ದರು.