ಬಳ್ಳಾರಿ: ಶತಮಾನೋತ್ಸವದ ಬಳಿಕ ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಮೊದಲ ಬಾರಿಗೆ ಚುನಾವಣೆ ಶುರುವಾಗಿದೆ. ಅದರಲ್ಲಿಯೂ ಗಣಿ ನಾಡು ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಸದಸ್ಯರ ಚುನಾವಣೆಗೆ ಭಾರಿ ಪೈಪೋಟಿ ನಡೆಯುತ್ತಿದೆ.
ರಾಜ್ಯದ 11 ಜಿಲ್ಲೆಗಳಲ್ಲಿನ ಮಹಾಸಭಾದ ಅಧ್ಯಕ್ಷ - ಕಾರ್ಯನಿರ್ವಾಹಕ ಸದಸ್ಯರ ಆಯ್ಕೆಯ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಗಣಿ ನಾಡು ಬಳ್ಳಾರಿಯಲ್ಲಿಯೂ ಚುನಾವಣೆ ರಂಗು ದಿನದಿಂದ ದಿನಕ್ಕೆ ಏರುತ್ತಿದೆ. ವೀರಶೈವ ಮಹಾಸಭಾ ಸ್ಥಾಪನೆಯಾಗಿ ಸುಮಾರು 116 ವರ್ಷಗಳೇ ಗತಿಸಿವೆ. ಈವರೆಗೂ ಅವಿರೋಧ ಆಯ್ಕೆ ಪ್ರಕ್ರಿಯೆಗೆ ಒತ್ತು ನೀಡುತ್ತಿದ್ದ, ಮಹಾಸಭಾ ಇದೀಗ ಚುನಾವಣೆ ಘೋಷಣೆ ಮಾಡಿರುವುದು ಕೂಡ ಭಾರಿ ಚರ್ಚೆಗೆ ಗ್ರಾಸವಾಗಿದೆ. ಫೆ.14 ರಂದು ನಡೆಯಲಿರುವ ಮಹಾಸಭಾದ ಚುನಾವಣೆ ನಿಮಿತ್ತ ನಾಮಪತ್ರಗಳ ಸಲ್ಲಿಕೆ ಜೋರಾಗಿದೆ.
15 ಸಾವಿರ ಮತದಾರರು: ವೀರಶೈವ ಮಹಾಸಭಾಕ್ಕೆ 2020 ಡಿ. ವರ್ಷಾಂತ್ಯಕ್ಕೆ ಸುಮಾರು 15 ಸಾವಿರ ಮಂದಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದು, ಅಂದಾಜು 1.50 ಕೋಟಿ ರೂ.ಗೂ ಅಧಿಕ ಮೊತ್ತದ ಹಣ ಸಂಗ್ರಹವಾಗಿದೆ. ಕೇವಲ ನೂರಾರು ಸದಸ್ಯರಿದ್ದ, ಆಯಾ ಜಿಲ್ಲೆಗಳಲ್ಲಿ ಈಗ ಸಾವಿರಾರು ಸದಸ್ಯರಿದ್ದಾರೆ. ವೀರಶೈವರು ಹೆಚ್ಚಿರುವ ಜಿಲ್ಲೆಗಳಲ್ಲಿ ಒಂದಾದ ಬಳ್ಳಾರಿಯೊಂದರಲ್ಲೇ ಸದಸ್ಯರ ಸಂಖ್ಯೆ 229 ರಿಂದ 3 ಸಾವಿರದ ಗಡಿ ದಾಟಿದೆ.
ಅವಿರೋಧ ಆಯ್ಕೆಗೆ ಒತ್ತು: ಈ ಹಿಂದೆ ಆಯಾ ಜಿಲ್ಲೆಗಳಲ್ಲಿ ಮಹಾಸಭಾದ ಸದಸ್ಯರ ಸಂಖ್ಯೆಯು ಬಹಳ ಕಡಿಮೆ ಇರುವುದರಿಂದ ಅವಿರೋಧ ಆಯ್ಕೆಯ ಪ್ರಕ್ರಿಯೆಗೆ ಒತ್ತು ನೀಡಲಾಗುತ್ತಿತ್ತು. ಇದಲ್ಲದೇ, ಸದಸ್ಯತ್ವ ನೋಂದಣಿ ಕೂಡ ಸೀಮಿತಗೊಳಿಸಲಾಗಿತ್ತು. ಆದರೀಗ, ಸದಸ್ವತ್ವ ನೋಂದಣಿ ಸೇರಿದಂತೆ ಚುನಾವಣಾ ಕಣಕ್ಕೆ ಬಹಳಷ್ಟು ಜನ ಧುಮುಕಿರೋದು ಅಚ್ಚರಿ ಮೂಡಿಸಿದೆ.