ಬಳ್ಳಾರಿ: ವಿಜಯನಗರ ವೈದ್ಯ ವಿಜ್ಞಾನ ಸಂಸ್ಥೆ (ವಿಮ್ಸ್) ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಒಳರೋಗಿಗಳು ಮೃತರಾಗಿದ್ದಾರೆ. ಘಟನೆ ಮಂಗಳವಾರ ನಡೆದಿದ್ದು, ಮೃತರು ಮೌಲಾ ಹುಸೇನ್ ಮತ್ತು ಚಿಟ್ಟೆಮ್ಮ ಎಂದು ತಿಳಿದುಬಂದಿದೆ.
ಮೃತ ಮೌಲಾ ಅವರಿಗೆ ಮೂತ್ರಪಿಂಡ ಸೇರಿದಂತೆ ಗಂಭೀರ ಸಮಸ್ಯೆಗಳಿದ್ದವು. ಚಿಟ್ಟೆಮ್ಮ ಅವರಿಗೆ ಹಾವು ಕಡಿದಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಗೆ ನಿಖರ ಕಾರಣದ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ. ವಿಮ್ಸ್ನಲ್ಲಿ ಮಂಗಳವಾರ ಎರಡರಿಂದ ಮೂರು ತಾಸುಗಳ ಕಾಲ ಕರೆಂಟ್ ಕಟ್ ಆಗಿತ್ತು ಎಂದು ಹೇಳಲಾಗಿದೆ.
ಇದೇ ಸಂದರ್ಭದಲ್ಲಿ ವೆಂಟಿಲೇಟರ್ನಲ್ಲಿದ್ದ ಇಬ್ಬರು ಮೃತರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿದ್ಯುತ್ ವ್ಯತ್ಯಯವಾದಾಗ ಜನರೇಟರ್ಗಳೂ ಕಾರ್ಯ ನಿರ್ವಹಿಸದಿರುವುದು ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ವಿಮ್ಸ್ ನಿರ್ದೇಶಕರ ಪ್ರತಿಕ್ರಿಯೆ: ವಿಮ್ಸ್ ಆಸ್ಪತ್ರೆಯಲ್ಲಿ ಆಗಿರುವ ಸಾವುಗಳು ವಿವಿಧ ತೀವ್ರತರದ ಆರೋಗ್ಯ ಸಮಸ್ಯೆಗಳಿಂದ ಸಂಭವಿಸಿವೆ. ಒಬ್ಬ ರೋಗಿಯು ವಿಷಪೂರಿತ ಹಾವಿನ ಕಡಿತದಿಂದ ದೇಹದಲ್ಲಿ ಆಂತರಿಕ ರಕ್ತಸ್ರಾವವಾಗಿ ಸಾವಿಗೀಡಾಗಿದ್ದರೆ, ಇನ್ನೊಬ್ಬರು ಬಹು ಅಂಗಾಗ ವೈಫಲ್ಯದಿಂದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಕೊನೆಗೆ ಅವರು ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಸ್ಪಷ್ಟನೆ ನೀಡಿದ್ದಾರೆ.
ವಿದ್ಯುತ್ ಕೈಕೊಟ್ಟಿರುವುದು ಕಾಕತಾಳೀಯ: ವಿಮ್ಸ್ ಆಸ್ಪತ್ರೆಯು ಉನ್ನತ ಚಿಕಿತ್ಸಾ ಕೇಂದ್ರವಾಗಿದೆ. ಎಲ್ಲಾ ಕೇಂದ್ರಗಳಲ್ಲಿ ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ಕೊನೆಗೆ ಪರಿಸ್ಥಿತಿ ಉಲ್ಬಣಗೊಂಡ ಬಳಿಕ ವಿಮ್ಸ್‌ಗೆ ದಾಖಲಾಗುವುದರಿಂದ ಸಾವು ಸಂಭವನೀಯತೆ ಹೆಚ್ಚಾಗುತ್ತದೆ. ಘಟನೆ ನಡೆದ ಸಮಯದಲ್ಲೇ ವಿದ್ಯುತ್ ಸಂಪರ್ಕ ಕೈಕೊಟ್ಟಿರುವುದು ಕಾಕತಾಳೀಯವಾಗಿದೆ. ವಿಮ್ಸ್ ಆಸ್ಪತ್ರೆ ಯಾವಾಗಲೂ ರೋಗಿಗಳ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿರ್ದೇಶಕರು ಸ್ಪಷ್ಟೀಕರಣ ನೀಡಿದ್ದಾರೆ.
ಆದರೂ ಪರಿಶೀಲನೆ ನಡೆಸುತ್ತೇವೆ- ಡಿಸಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಾಟಿ, ವಿಮ್ಸ್ ತೀವ್ರ ನಿಗಾ ಘಟಕದಲ್ಲಿ ಇಬ್ಬರು ಮೃತಪಟ್ಟ ವಿಚಾರ ಗಮನಕ್ಕೆ ಬಂದಿದೆ. ಇದು ಕರೆಂಟ್ ಇಲ್ಲವೇ ಜನರೇಟರ್ ಸಮಸ್ಯೆಯಿಂದ ಸಂಭವಿಸಿದ್ದಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ. ಆದರೂ ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ವಿಮ್ಸ್ ಐಸಿಯುನಲ್ಲಿ ಜನರೇಟರ್ ಸಮಸ್ಯೆ ಇದೆ. ಮಂಗಳವಾರ ಕೆಎಂಇಆರ್‌ಸಿ ಸಭೆಯಲ್ಲೂ ಈ ಬಗ್ಗೆ ಚರ್ಚಿಸಲಾಗಿದೆ. 500 ಕೆ.ವಿ. ಸಾಮರ್ಥ್ಯದ ಜನರೇಟರ್ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕೆಎಂಇಆರ್‌ಸಿ ಅನುದಾನದಡಿ ವಿಮ್ಸ್‌ಗೆ ಸಾಕಷ್ಟು ಹಣ ಹಂಚಿಕೆ ಮಾಡಲಾಗಿದೆ. ವಿಮ್ಸ್‌ನಲ್ಲಿರುವ ಸೌಲಭ್ಯಗಳನ್ನು ಉತ್ತಮಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: HLC ಕಾಲುವೆಗೆ ಉರುಳಿ ಬಿದ್ದ ಆಟೋ: ಮೂವರು ಸಾವು, ಹಲವರು ನಾಪತ್ತೆ, ಐದು ಜನರ ರಕ್ಷಣೆ