ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಆಗಿ ಅಧಿಕಾರ ವಹಿಸಿಕೊಂಡಿದ್ದ ಪ್ರೀತಿ ಗೆಲ್ಹೋಟ್ ಅವರನ್ನ ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆಗೊಳಿಸಿದೆ. ಅವರು ಕೇವಲ 10 ದಿನ ಮಾತ್ರ ಆಯುಕ್ತೆಯಾಗಿ ಕಾರ್ಯನಿರ್ವಹಿಸಿದ್ದು, ಅಷ್ಟರಲ್ಲೇ ವರ್ಗಾವಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ತೆರವಾಗಿದ್ದ ಮಹಾನಗರ ಪಾಲಿಕೆ ಆಯುಕ್ತರ ಹುದ್ದೆಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನೆ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ (ಕೆಎಎಸ್ ಕಿರಿಯ ಶ್ರೇಣಿ) ಎನ್.ಮಹೇಶಬಾಬು ಅವರನ್ನ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.
ರಾಜಸ್ಥಾನ ಮೂಲದ ಪ್ರೀತಿ ಗೆಲ್ಹೋಟ್ ಅವರು, 2016ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದು, ತುಮಕೂರಿನಲ್ಲಿ ಪ್ರೊಬೇಷನರಿ ಪೂರ್ಣಗೊಳಿಸಿದ್ದಾರೆ. ಕುಮಟಾದಲ್ಲಿ ಸಹಾಯಕ ಆಯುಕ್ತೆ ಆಗಿ, ಉಡುಪಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ತಲಾ ಒಂದೊಂದು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ನ.13 ರಂದು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆಯಾಗಿ ಅಧಿಕಾರವಹಿಸಿ ಕೊಂಡಿದ್ದ ಅವರನ್ನ ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮಹೇಶಬಾಬು ಅವರನ್ನ ಬಳ್ಳಾರಿ ಮಹಾನಗರ ಪಾಲಿಕೆಗೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.