ಬಳ್ಳಾರಿ: ನಗರದ ರಾಯಲ್ ವೃತ್ತದಲ್ಲಿ ಇಂದು ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಲಕ್ಷ್ಮಿಪತಿ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾಗಿದ್ದರು. ಲಾಕ್ಡೌನ್ ಸಮಯದಲ್ಲಿ ಅನವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ 33 ಆಟೋಗಳನ್ನು ವಶಪಡಿಸಿಕೊಂಡರು.
ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ದೃಷ್ಟಿಯಿಂದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಈ ಸಮಯದಲ್ಲಿ ಬೈಕ್ನಲ್ಲಿ ಮಾತ್ರ ರಸ್ತೆಯಲ್ಲಿ ಓಡಾಡಬಹುದು. ಆದರೆ ಬಾಡಿಗೆಗಾಗಿ ರಸ್ತೆಗೆ ಇಳಿದಿದ್ದ ಹಾಗೂ ಗುಂಪು ಗುಂಪಾಗಿ ಸೇರಿದ್ದ ಆಟೋ ಚಾಲಕರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕರು ದಿನೋಪಯೋಗಿ ವಸ್ತುಗಳನ್ನು ಖರೀದಿ ಮಾಡಲು ಯಾವುದೇ ಕಾರಣಕ್ಕೂ ಆಟೋದಲ್ಲಿ ಪ್ರಯಾಣ ಮಾಡುವಂತಿಲ್ಲ. ಆಟೋದಲ್ಲಿ ಪ್ರಯಾಣ ಮಾಡಿದರೆ, ಗುಂಪು ಗುಂಪಾಗಿ ಸೇರಿ ಲಾಕ್ಡೌನ್ ನಿಮಯ ಉಲ್ಲಂಘಿಸಿದರೆ ಇಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಲಕ್ಷ್ಮಿಪತಿ ಎಚ್ಚರಿಕೆ ನೀಡಿದ್ದಾರೆ.