ಬಳ್ಳಾರಿ: ದೇವದಾಸಿ ಮಹಿಳೆಯರ ಮಕ್ಕಳ ಮದುವೆಗಳಿಗೆ ಗಂಡು ಮಕ್ಕಳಿಗೆ 3 ಲಕ್ಷ ಮತ್ತು ಹೆಣ್ಣು ಮಕ್ಕಳಿಗೆ 5 ಲಕ್ಷ ರೂ. ಪ್ರೋತ್ಸಾಹಧನವನ್ನು ಕರ್ನಾಟಕ ಸರ್ಕಾರ ನೀಡಬೇಕೆಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರು ವಿಮೋಚನಾ ಸಂಘದ ಗೌರವಾಧ್ಯಕ್ಷ ಯು ಬಸವರಾಜ್ ಆಗ್ರಹಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ 'ಈಟಿವಿ ಭಾರತ್'ನೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ದೇವದಾಸಿ ಮಹಿಳೆಯರ ಮಕ್ಕಳು ಅಂತರ್ಜಾತಿ ವಿವಾಹವಾದರಷ್ಟೇ ಪ್ರೋತ್ಸಾಹಧನ ನೀಡುವುದಾಗಿ ಅನ್ಯಾಯ ಮಾಡಲಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೇವದಾಸಿ ಮಹಿಳೆಯರ ಕುಟುಂಬಗಳಿಗೆ ಮಾತ್ರವೆಂದು ಸೀಮಿತಗೊಳಿಸಿದೆ. ನಂತರ ಹಿಂದುಳಿದ ಜಾತಿಗಳಲ್ಲಿನ ದೇವದಾಸಿ ಮಹಿಳೆಯರ ಕುಟುಂಬಗಳನ್ನು ಹೊರಗಿಟ್ಟು ತಾರತಮ್ಯ ಮಾಡುತ್ತಿದ್ದಾರೆ. ದೇವದಾಸಿ ಮಹಿಳೆಯರ ಕುಟುಂಬಗಳ ಸದಸ್ಯರ ನಡುವೆ ಮದುವೆಯಾದರೆ ಪ್ರೋತ್ಸಾಹಧನವಿಲ್ಲ ಎಂಬ ನಿಯಮ ರೂಪಿಸಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು.
ಭ್ರಷ್ಟಾಚಾರ ತಡೆಯಲು ಒತ್ತಾಯ :
ದೇವದಾಸಿ ಮಹಿಳೆಯರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸಲು ಫಲಾನುಭವಿಗಳ ಆಯ್ಕೆಯಲ್ಲಿ ಭ್ರಷ್ಟಾಚಾರ, ಮೋಸ ನಡೆಯುತ್ತಿದೆ. ದೇವದಾಸಿ ಮಹಿಳೆಯರಿಗೆ ಸಬ್ಸಿಡಿ ಸಹಿತ ಸಾಲ ನೀಡುವ ಯೋಜನೆ, ವಸತಿ ನಿಲಯಗಳನ್ನು ಜಾರಿಗೆ ತರಬೇಕು. ಮನೆಯಲ್ಲಿ ತಾಯಿ ಮರಣ ಹೊಂದಿದರೆ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ದೇವದಾಸಿ ಕುಟುಂಬಗಳ ಸರ್ವೇ ಮಾಡಿ ಸೌಲಭ್ಯ ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರು ವಿಮೋಚನಾ ಸಂಘ ಜಿಲ್ಲಾ ಅಧ್ಯಕ್ಷೆ ಕೆ.ನಾಗರತ್ಮಮ್ಮ , ಪ್ರಧಾನ ಕಾರ್ಯದರ್ಶಿ ಬಿ.ಮಾಲಮ್ಮ, ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮತ್ತು ಇನ್ನಿತರರು ಹಾಜರಿದ್ದರು.