ಬಳ್ಳಾರಿ: ಕೊರೊನಾ ಪಾಸಿಟಿವ್ ಬಾಧಿತರಾಗಿ ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಮಂದಿಯ ಪೈಕಿ ಮೂವರು ಗುಣಮುಖರಾಗಿದ್ದಾರೆ. ಅವರನ್ನು ಜಿಲ್ಲಾಮಟ್ಟದ ಕೋವಿಡ್-19 ಸಲಹಾ ಸಮಿತಿ ನಿರ್ಣಯದ ಅನುಸಾರ ಏ. 23ರಂದು ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಜಿಲ್ಲಾಮಟ್ಟದ ಟಾಸ್ಕ್ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ. ಪಿ- 89, ಪಿ-91 ಮತ್ತು ಪಿ-141 ಕೊರೊನಾ ಸೊಂಕಿತ ರೋಗಿಗಳಿಗೆ ಸಂಬಂಧಿಸಿದಂತೆ ಕೋವಿಡ್-19 ಟೆಸ್ಟ್ ಗಳನ್ನು ಮಾಡಲಾಗಿದೆ. ಇವರ ಟೆಸ್ಟ್ ವರದಿ ನೆಗೆಟಿವ್ ಬಂದಿರುವ ಕಾರಣ ಮತ್ತು ಈ ಪರೀಕ್ಷೆಯ ವರದಿಯ ಆಧಾರದ ಮೇರೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ವೈದ್ಯಶಾಸ್ತ್ರ ವಿಭಾಗದ ವೈದ್ಯರು ರೋಗಿಗಳು ಫಿಟ್ ಇರುವುದಾಗಿ ತಿಳಿಸಿದ್ದರಿಂದ ಡಿಸ್ಟಾರ್ಚ್ ಮಾಡಲು ನಿರ್ಧರಿಸಲಾಗಿದೆ. ಇವರನ್ನು ಗುರುವಾರ ಬೆಳಗ್ಗೆ ಕೋವಿಡ್ ಆಸ್ಪತ್ರೆಯಿಂದ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಸಿಬ್ಬಂದಿ, ಜಿಲ್ಲಾಧಿಕಾರಿ, ಎಸ್ಪಿ, ಜಿಪಂ ಸಿಇಒ ಅವರ ಸಮ್ಮುಖದಲ್ಲಿ ಚಪ್ಪಾಳೆ ತಟ್ಟಿ ಅಭಿನಂದಿಸುವ ಮೂಲಕ ಬಿಡುಗಡೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.
ಇವರನ್ನು 14 ದಿನಗಳವರೆಗೆ ಹೋಮ್ ಕ್ವಾರಂಟೈನ್ ಮತ್ತು 14 ದಿನಗಳ ಕಾಲ ಸೆಲ್ಪ್ ರಿಪೋರ್ಟಿಂಗ್ ಮಾಡಲಾಗುವುದು ಹಾಗೂ ಜಿಲ್ಲಾ ಕಂಟ್ರೋಲ್ ರೂಂ ಮತ್ತು ನಮ್ಮ ರ್ಯಾಪಿಡ್ ರೆಸ್ಪಾನ್ಸ್ ತಂಡದಿಂದ 28 ದಿನಗಳ ಕಾಲ ನಿಗಾವಹಿಸಲಾಗುವುದು. ಈಆರ್ಆರ್ಟಿ ತಂಡಗಳು ಗುಣಮುಖರಾಗಿರುವ ಈ ಮೂವರ ಮನೆಗಳ ಸುತ್ತಮುತ್ತಲಿನ ಮನೆಯವರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಇನ್ನುಳಿದ ಸೊಂಕಿತರ ಚಿಕಿತ್ಸಾ ವಿವರ ಪಡೆದ ಜಿಲ್ಲಾಧಿಕಾರಿ ನಕುಲ್ ಅವರು, ಎಲ್ಲರಿಗೂ ಸೂಕ್ತ ಚಿಕಿತ್ಸೆ ಕೊಡಿ. ಆದಷ್ಟು ಅವರು ಬೇಗ ಗುಣಮುಖರಾಗಿ ಹೊರ ಬರಲಿ. ಕೋವಿಡ್-19ಗೆ ಸಂಬಂಧಿಸಿದಂತೆ ಅಗತ್ಯ ಪರಿಕರಗಳು ಅಗತ್ಯವಿದ್ದಲ್ಲಿ ಮಾಹಿತಿ ನೀಡಿ, ಅವುಗಳನ್ನು ಒದಗಿಸಿಕೊಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.