ಬಳ್ಳಾರಿ: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ಬೆಡ್ಗಳ ಕೊರತೆಯಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು ಹೆಚ್ಚಾದ್ರೆ ಯಾವ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಅಗತ್ಯಕ್ಕನುಗುಣವಾಗಿ ಬೆಡ್ ವ್ಯವಸ್ಥೆಯಿದೆ. ಜಿಲ್ಲಾ ಸರ್ಕಾರಿ ಕೋವಿಡ್ ಆಸ್ಪತ್ರೆ ಹಾಗೂ ಜಿಂದಾಲ್ ಸಂಜೀವಿನಿ ಆಸ್ಪತ್ರೆಗಳಲ್ಲಿ ಬೇಕಾದಷ್ಟು ಬೆಡ್ಗಳ ವ್ಯವಸ್ಥೆ ಇದೆ. ಗಂಭೀರ ಸ್ವರೂಪದ ಕೋವಿಡ್ ಸೋಂಕು ಇರುವ ರೋಗಿಗಳನ್ನು ಈ ಎರಡೂ ಆಸ್ಪತ್ರೆಗಳಲ್ಲಿ ಐಸೋಲೇಟ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಉಳಿದಂತೆ ಸಾಮಾನ್ಯ ಕೋವಿಡ್ ಸೋಂಕಿತರನ್ನು ಬಳ್ಳಾರಿ ನಗರದ ಡೆಂಟಲ್ ಕಾಲೇಜಿನಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಕಾಲೇಜಿನಲ್ಲಿ 200 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಸಂಡೂರು ತಾಲೂಕಿನ ಬಂಡ್ರಿ ಹಾಗೂ ಬಳ್ಳಾರಿ ತಾಲೂಕಿನ ಅಲ್ಲೀಪುರ ಮೊರಾರ್ಜಿ ದೇಸಾಯಿ ದೇಸಾಯಿ ವಸತಿ ನಿಲಯಗಳಲ್ಲಿ ತಲಾ ನೂರು ಬೆಡ್ ವ್ಯವಸ್ಥೆ ಮಾಡಿಟ್ಟುಕೊಳ್ಳಲಾಗಿದೆ, ಅದನ್ನು ಇದುವರೆಗೆ ಬಳಸಿಲ್ಲ. ಟ್ರಾಮಾ ಕೇರ್ ಸೆಂಟರ್ನಲ್ಲೂ ಕೂಡ ಅಂದಾಜು 300 ಬೆಡ್ ಸೌಲಭ್ಯ ಸಿಗಲಿದೆ. ಹೀಗಾಗಿ, ಕೋವಿಡ್ ಸೋಂಕಿತರು ಹೆಚ್ಚಾದ್ರೆ ಬೆಡ್ ಕೊರತೆ ಉಂಟಾಗುವುದಿಲ್ಲ ಎಂದು ಹೇಳಿದರು.