ವಿಜಯನಗರ: ತಂತ್ರಜ್ಞಾನ, ಸಾಕ್ಷರತೆ ಹೆಚ್ಚಿದಷ್ಟು ಮನುಷ್ಯ ಮಾನವೀಯತೆ ಕಳೆದುಕೊಳ್ಳುತ್ತಿದ್ದಾನೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಲೇ ಇವೆ. ವಿಜಯನಗರದಲ್ಲಿ ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿಯಾಗಿದೆ. ಹೌದು, ಇಲ್ಲೊಬ್ಬ ವ್ಯಕ್ತಿ ಸಾವಿಗೆ ಶರಣಾಗುತ್ತಿದ್ದಾನೆ ಎಂಬುದು ತಿಳಿದ್ರೂ, ಅಲ್ಲಿ ನೆರೆದಿದ್ದ ಜನರು ಅದನ್ನು ನೋಡುತ್ತ ವಿಡಿಯೋ ಮಾಡುತ್ತಿದ್ದರು.
ಆ ವ್ಯಕ್ತಿ ನೇಣು ಹಾಕಿಕೊಳ್ಳದಂತೆ ತಡೆಯುವುದನ್ನು ಬಿಟ್ಟು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅಮಾನವೀಯ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ವಿದ್ಯುತ್ ಬೀದಿ ದೀಪದ ಕಂಬಕ್ಕೆ ಮಂಜುನಾಥ್ (25) ಎಂಬಾತ ನೇಣು ಬಿಗಿದುಕೊಂಡಿದ್ದಾನೆ.
ಲುಂಗಿಯಿಂದ ನೇಣು ಹಾಕಿಕೊಂಡ ಯುವಕ: ಇದನ್ನು ದೂರದಿಂದ ನೋಡುತ್ತಿದ್ದ ಕೆಲವರು ಆರಾಮ ಆಗಿ ನಿಂತು ಘಟನೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಕಳೆದ ನಾಲ್ಕು ದಿನಗಳಿಂದ ವೈರಲ್ ಆಗುತ್ತಿದೆ. ವಿಡಿಯೋ ಮಾಡಿದವರ ವಿರುದ್ಧ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವನ್ನು ಹೊರ ಹಾಕಿದ್ದಾರೆ. ದೃಶ್ಯವನ್ನು ಸೆರೆ ಹಿಡಿಯುವ ವೇಳೆ ಒಬ್ಬರಿಗಿಂತ ಹೆಚ್ಚು ಜನ ಅಲ್ಲಿದ್ದರು ಎಂಬುದು ಮೊಬೈಲ್‌ನಲ್ಲಿ ರೆಕಾರ್ಡ್ ಆದ ಧ್ವನಿಯಿಂದ ತಿಳಿಯುತ್ತದೆ. ಆದ್ರೆ ಯಾರೂ ಕೂಡ ಉಳಿಸುವ ಮಾತುಗಳನ್ನು ಆಡುವುದಿಲ್ಲ. ಹನುಮನಹಳ್ಳಿಯ ಫ್ಲೈಓವರ್ ಮೇಲಿನ ವಿದ್ಯುತ್ ಕಂಬ ಹತ್ತಿ ಯುವಕ ತನ್ನದೇ ಲುಂಗಿಯಿಂದ ನೇಣು ಹಾಕಿಕೊಂಡಿದ್ದಾನೆ.
ಇದನ್ನೂ ಓದಿ: ಕೋಲಾರ: ಗ್ರಾಮ ಪಂಚಾಯತ್ ಪಿಡಿಓ ಆತ್ಮಹತ್ಯೆ
ವಿಡಿಯೋ ಮಾಡುವವರು ಕುಡಿದು ಹೀಗೆ ಮಾಡಿಕೊಳ್ತಿದ್ದಾನೆ ಎಂದು ಮಾತಾಡಿಕೊಂಡಿರುವುದು ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದೆ. ಈ ವಿಚಾರ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯುವಕ ಮಂಜುನಾಥ್ ಬೀದಿ ದೀಪದ ಕಂಬಕ್ಕೆ ನೇಣು ಹಾಕಿಕೊಳ್ಳುವಾಗ ಆತನನ್ನು ಉಳಿಸುವ ಪ್ರಯತ್ನ ಮಾಡುವುದನ್ನು ಬಿಟ್ಟು, ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿಯಲು ಮುಂದಾಗಿರುವುದು ಮರೆಯಾದ ಮಾನವೀಯತೆಗೆ ಕನ್ನಡಿ ಹಿಡಿದಂತಿದೆ. ಜನರಲ್ಲಿ ಮಾನವೀಯತೆಗಿಂತ ಮನರಂಜನೆಯೇ ಮುಖ್ಯ ಆಗಿದೆ ಎಂಬುದಕ್ಕೆ ಇದು ಸಾಕ್ಷಿ.