ಬಳ್ಳಾರಿ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಿರುಗುಪ್ಪ ತಾಲೂಕಿನ ದಾಸಪುರ ಗ್ರಾಮದ ಮಲ್ಲಿಕಾರ್ಜುನ ಎಂಬ ರೈತ ತನ್ನ ನಾಲ್ಕು ಎಕರೆ ಹೊಲದಲ್ಲಿ ಬೆಳೆದಿದ್ದಿ ಕಲ್ಲಂಗಡಿ ಹಣ್ಣನ್ನು ಮಾರುಕಟ್ಟೆಗೆ ಸಾಗಿಸಲಾಗದೇ ನಷ್ಟ ಅನುಭವಿಸುತ್ತಿದ್ದಾರೆ. ಉತ್ತಮ ಫಸಲು ಬಂದಿದೆಯಾದ್ರೂ ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಆಗುತ್ತಿಲ್ಲ. ತಲಾ ಒಂದೊಂದು ಎಕರೆಗೆ ಅಂದಾಜು ₹30,000 ವ್ಯಯಿಸಿದ್ದಾರೆ. ಖರ್ಚಾದ ಹಣವೂ ಕೂಡ ವಾಪಸ್ ಬರೋದು ಕಷ್ಟವಾಗಿದೆ.
ಕಟಾವಿಗೆ ಬಂದಂತಹ ಹಣ್ಣನ್ನು ಕೀಳಲಾಗದೇ ಅದೀಗ ಕೊಳೆತ ಸ್ಥಿತಿಯಲ್ಲಿ ಬಿದ್ದಿದೆ. ಹೀಗಾಗಿ, ಸ್ಥಳದಲ್ಲೇ ಮಾರಾಟ ಮಾಡಲು ಮುಂದಾದ್ರೂ ಕೂಡ ಯಾರೊಬ್ಬರೂ ಖರೀದಿಗೆ ಮುಂದಾಗುತ್ತಿಲ್ಲ ಎಂಬ ಅಳಲನ್ನು ಮಲ್ಲಿಕಾರ್ಜುನ ತೋಡಿಕೊಂಡಿದ್ದಾರೆ. ಈ ಹಿಂದೆ ಟನ್‌ಗೆ 7000 ರೂ.ವರೆಗೆ ಬೆಂಬಲ ಬೆಲೆಯಿತ್ತಾದ್ರೂ ಈ ಲಾಕ್ಡೌನ್ನಿಂದಾಗಿ ಟನ್‌ಗೆ ಕೇವಲ 2 ರಿಂದ 3 ಸಾವಿರದವರೆಗೆ ಕೇಳೋರಿಲ್ಲ. ಇದರಿಂದ ಬೆಳೆಗೆ ವ್ಯಯಿಸಿದ ಹಣವನ್ನು ಮರಳಿ ಪಡಿಯಲಾಗದ ಸ್ಥಿತಿ ಎದುರಾಗಿದೆ ಎಂದಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಲ್ಲಂಗಡಿ ಮಾರಾಟವಾಗದ ಕಾರಣ ಬಳ್ಳಿಯಲ್ಲೇ ಹಣ್ಣುಗಳು ಮಾಗಿ ಹೋಗುತ್ತಿರುವುದಿಂದ ಗ್ರಾಮದ ಸುತ್ತಮುತ್ತಲಿನ ಜನರಿಗೆ ಉಚಿತವಾಗಿ ವಿತರಿಸಲು ಮಲ್ಲಿಕಾರ್ಜುನ ಮುಂದಾಗಿದ್ದಾರೆ.