ಹೊಸಪೇಟೆ: ವಾಲ್ಮೀಕಿ, ಭೋವಿ, ದಲಿತರು ಹಾಗೂ ಹಿಂದುಳಿದವರು ದೇಶಕ್ಕೆ ಬಂದಿರುವ ವಲಸಿಗರೆಂದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನೀಡಿರುವ ಹೇಳಿಕೆಯನ್ನು ಖಂಡಿಸಿ, ಪ್ರತಿಭಟನೆಯನ್ನು ನಡೆಸಲಾಗುತ್ತದೆ ಎಂದು ಪ್ರಗತಿಪರ ಚಿಂತಕ ಡಿ. ಹೆಚ್. ಪೂಜಾರ ತಿಳಿಸಿದ್ದಾರೆ.
ನಗರದಲ್ಲಿ ಇಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ, ಸಾಂಕೇತಿಕ ಪ್ರತಿಭಟನೆ-ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ದೇಶದ ಮೂಲ ನಿವಾಸಿಗಳನ್ನು ವಲಸೆ ಬಂದವರೆಂದು ಹೇಳಿ, ಬಿ.ಎಲ್. ಸಂತೋಷ್ ಅವರು ಅವಮಾನವನ್ನು ಮಾಡಿದ್ದಾರೆ. ಇದನ್ನು ಪ್ರಗತಿಪರ ಸಂಘಟನೆಗಳು ಖಂಡಿಸುತ್ತಿವೆ ಎಂದರು.
ಬಿಜೆಪಿ ಸರಕಾರ ದೇಶದ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಬಿಜೆಪಿ ನಾಯಕರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅಕ್ರೋಶವನ್ನು ವ್ಯಕ್ತಪಡಿಸಿದರು. ದೇಶದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿದೆ. ಆದರೆ ಸರ್ಕಾರ ಆದರ ಬಗ್ಗೆ ಗಮನ ಹರಿಸುವುದಿಲ್ಲ ಎಂದರು.
ಬಿಜೆಪಿಯವರು ಹಿಂದೂ ಮತ್ತು ಮುಸ್ಲಿಂ ಧರ್ಮದವರ ಪ್ರೀತಿ ಮತ್ತು ಭಾಂದವ್ಯಕ್ಕೆ ಬೆಂಕಿಯನ್ನು ಇಟ್ಟಿದ್ದಾರೆ. ಜಾತಿ ಜಾತಿಗಳ ನಡುವೆ ವಿಷದ ಬೀಜವನ್ನು ಬಿತ್ತುತ್ತಿದ್ದಾರೆ. ಸಾಮರಸ್ಯವನ್ನು ಹಾಳುಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.