ಬಳ್ಳಾರಿ: ಬುಡಾ ಕಚೇರಿ ಆವರಣದಲ್ಲಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಮತ್ತು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಮ್ಮೂರು ಶೇಖರ್ ಹಾಗೂ ಜಿಲ್ಲಾ ಬಿಜೆಪಿ ಯುವ ಮತ್ತು ಮಹಿಳಾ ಮೋರ್ಚಾ ನೇತೃತ್ವದಲ್ಲಿ ಸ್ವಚ್ಛ ಭಾರತ ಕಾರ್ಯಕ್ರಮ ನಡೆಯಿತು.
ನಂತರ ಮಾಧ್ಯದವರ ಜೊತೆ ಮಾತನಾಡಿದ ಶಾಸಕ ಜಿ.ಸೋಮಶೇಖರ್ ರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಮ್ಮೂರು ಶೇಖರ್ ಹಾಗೂ ಬಳ್ಳಾರಿ ಬಿಜೆಪಿಯ ಯುವ ಮತ್ತು ಮಹಿಳಾ ಮೋರ್ಚಾ ನೇತೃತ್ವದಲ್ಲಿ ಇಂದು ಸ್ವಚ್ಛ ಭಾರತ ಕಾರ್ಯಕ್ರಮ ಆರಂಭವಾಗಿದೆ. ಇನ್ಮುಂದೆ ಬೇರೆ ಬೇರೆ ಸ್ಥಳಗಳಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯ ಮಾಡುತ್ತೇವೆ ಎಂದರು.
ಬುಡಾ ಆವರಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಅದಕ್ಕೆ ಕಡಿವಾಣ ಇಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಜೆಸಿಬಿಗಳನ್ನು ತರಸಿ ಸ್ವಚ್ಛತೆ ಮಾಡಿಸಿದ್ದೇವೆ. ಪೊಲೀಸ್ ಅಧಿಕಾರಿಗಳಿಗೆ ಹೇಳಿ ಈ ಸ್ಥಳದಲ್ಲಿ ಗಸ್ತು ತಿರುಗಲು ತಿಳಿಸುತ್ತೇವೆ ಎಂದರು. ಪಾರ್ಕ್ ಅಭಿವೃದ್ಧಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವೆ ಎಂದು ಭರವಸೆ ನೀಡಿದರು.
ಬುಡಾ ಆಧ್ಯಕ್ಷ ದಮ್ಮೂರು ಶೇಖರ್ ಮಾತನಾಡಿ, ಸ್ವಚ್ಛ ಭಾರತ ಕಾರ್ಯಕ್ರಮವನ್ನು ಇಂದು ಆರಂಭಿಸಿದ್ದೇವೆ. ಮೊದಲು ನಮ್ಮ ಕಚೇರಿ ಸುತ್ತಮುತ್ತ ಸ್ವಚ್ಛತೆ ಮಾಡಿಕೊಳ್ಳಬೇಕು. ನಂತರ ಬೇರೆ ಕಡೆ ಸ್ವಚ್ಛತೆ ಮಾಡಬಹುದು ಎಂದರು.