ಬಳ್ಳಾರಿ: ಹಂಪಿ ವಿವಿಯ ವಸತಿ ನಿಲಯದಲ್ಲಿ ತಾತ್ಕಾಲಿಕವಾಗಿ ನೇಮಕಗೊಂಡ ನಿಲಯ ಪಾಲಕರು ಹಾಗೂ ಅಡುಗೆ ಸಿಬ್ಬಂದಿಯನ್ನು ಕೂಡಲೇ ವಜಾಗೊಳಿಸಬೇಕು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.
ವಸತಿ ನಿಲಯದ ಮುಂಭಾಗ ಜಮಾಯಿಸಿದ ನೂರಾರು ವಿದ್ಯಾರ್ಥಿನಿಯರು, ವಿವಿ ವಿರುದ್ಧ ಘೋಷಣೆ ಕೂಗಿದರು. ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ತಾತ್ಕಾಲಿಕವಾಗಿ ನಿಲಯ ಪಾಲಕರನ್ನು ನೇಮಿಸಲಾಗಿದೆ. ಅವರು ನಿಲಯದಲ್ಲಿ ಪೂರ್ಣ ಸಮಯದಲ್ಲಿ ಇರುವುದಿಲ್ಲ. ಹೀಗಾಗಿ ವಸತಿ ನಿಲಯವು ಸಮಸ್ಯೆಗಳ ಆಗರವಾಗಿದೆ. ಅದಕ್ಕೆ ವಿದ್ಯಾರ್ಥಿನಿಯರು ವಾಂತಿ - ಭೇದಿ ಮಾಡಿಕೊಂಡು ಅಸ್ವಸ್ಥರಾಗಿರುವುದೇ ಬಹುಮುಖ್ಯ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇರದ ವಸತಿ ನಿಲಯ ಪಾಲಕರನ್ನು ಹಾಗೂ ಅಡುಗೆ ಸಿಬ್ಬಂದಿಯನ್ನು ತಕ್ಷಣ ವಜಾಗೊಳಿಸಬೇಕು. ಅವರ ಸ್ಥಾನಕ್ಕೆ ಖಾಯಂ ನೌಕರರನ್ನು ನೇಮಿಸಬೇಕು. ಅಲ್ಲದೇ, ವಿಷಪೂರಿತ ಆಹಾರವನ್ನು ಬದಲಾವಣೆ ಮಾಡಬೇಕು. ವಸತಿ ನಿಲಯ ಪಾಲಕರ ಹಾಗೂ ಅಡುಗೆ ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.