ಬಳ್ಳಾರಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಯ ಆವರಣದಲ್ಲಿ ಜ,31ಹಾಗೂ ಫೆ.1 ಮತ್ತು 2 ರಂದು ಮೂರು ದಿನಗಳ ಕಾಲ ರಾಜ್ಯ ಮಟ್ಟದ ಕೀಲು-ಎಲುಬು ಸಮ್ಮೇಳನ ನಡೆಯಲಿದೆ.
ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ ಮುಖ್ಯಸ್ಥ ಡಾ.ಅಶ್ವಿನಿಕುಮಾರ ಸಿಂಗ್ ಮಾತನಾಡಿ, ಈ ಸಮ್ಮೇಳನದಲ್ಲಿ ಸರಿಸುಮಾರು 600ಕ್ಕೂ ಅಧಿಕ ವೈಜ್ಞಾನಿಕ ಪತ್ರಿಕೆಗಳ ಪ್ರದರ್ಶನ ಮಾಡಲಾಗುವುದು. ಅತ್ಯುತ್ತಮ ಪತ್ರಿಕೆಗಳಿಗೆ ಗೋಲ್ಡ್ ಮೆಡಲ್ ಪತ್ರಿಕೆ ಎಂಬ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಸಮ್ಮೇಳನಕ್ಕೆ ಇಂಗ್ಲೆಂಡ್ ಸೇರಿದಂತೆ ದೇಶದ ನಾನಾ ರಾಜ್ಯಗಳಿಂದಲೂ ಅಂದಾಜು 100 ನುರಿತ ತಜ್ಞರು ಹಾಗೂ ಅಂದಾಜು 1000 ಮಂದಿ ಡೆಲಿಗೇಟ್ಸ್ ಭಾಗಿಯಾಗಲಿದ್ದಾರೆ ಎಂದರು.
ಇಬ್ಬರು ಎಲುಬು ಮತ್ತು ಕೀಲು ರೋಗಿಗಳನ್ನು ಗುರುತಿಸಿ ನಗರದ ಆರಾಧನಾ ಆಸ್ಪತ್ರೆಯಲ್ಲಿ ನೇರ ಪ್ರಸಾರದಲ್ಲಿ ಚಿಕಿತ್ಸೆಯನ್ನು ನೀಡಲಾಗುವುದು. ನಾಳೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ನೇರ ಪ್ರಸಾರ ಇರುತ್ತೆ. ಕಿರಿಯ ವೈದ್ಯರಿಗೆ ರಸಪ್ರಶ್ನೆ ಸೇರಿದಂತೆ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಲಾಗುವುದು ಎಂದು ತಿಳಿಸಿದರು.
44ನೇಯ ರಾಜ್ಯಮಟ್ಟದ ಸಮ್ಮೇಳನ ಇದಾಗಿದ್ದು, 10 ಮಂದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ತಜ್ಞ ವೈದ್ಯರು, 30 ಮಂದಿ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ವೈದ್ಯರು ಹಾಗೂ 60 ಹಿರಿಯ ತಜ್ಞ ವೈದ್ಯರು ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದರು.