ಹೊಸಪೇಟೆ: ಮೋಟಾರು ವಾಹನ ಕಾಯ್ದೆ ಬಡ ಆಟೋ ಚಾಲಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದು, ಸರ್ಕಾರ ಇದನ್ನು ತಿದ್ದುಪಡಿ ಮಾಡಲಾಗುತ್ತದೆ ಎಂದು ಭರವಸೆ ನೀಡಿತ್ತು. ಆದರೀಗ ಈ ವಿಷಯವನ್ನು ಗಾಳಿಗೆ ತೂರಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಉಪಾಧ್ಯಕ್ಷ ಆರ್.ಬಸವರಾಜ ಹೇಳಿದ್ದಾರೆ.
ಇಂದು ಬೆಳಗ್ಗೆ ಭಾರತ ಕಮ್ಯುನಿಸ್ಟ್ ಪಕ್ಷದ ಆಟೋ ಚಾಲಕರ ಸಂಘದ ವತಿಯಿಂದ ರಾಜ್ಯ ಮಟ್ಟದ 2ನೇ ರಾಜ್ಯ ಸಮ್ಮೇಳನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಗರದ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರಗೆ ಕಾಲ್ನಡಿಗೆಯ ಮೂಲಕ ಜಾಥಾ ಮಾಡಿ ಕಾರ್ಯಕ್ರಮಕ್ಕೆ ಎಸ್.ವರಲಕ್ಷ್ಮೀ ಚಾಲನೆ ನೀಡಿದರು.
ಆಟೋ ಚಾಲಕರು ಬಡವರಾಗಿದ್ದು, ಅವರು ಹಗಲಿರಳು ಕೆಲಸ ಮಾಡುತ್ತಾರೆ. ಅವರಿಗೆ ಬದುಕು ಕಟ್ಟಿಕೊಳ್ಳಲು ಸರ್ಕಾರ ಸಾಮಾಜಿಕ ಭದ್ರತೆ ಒದಗಿಸಿಕೊಡಬೇಕಿದೆ. ವಾಹನಗಳ ಮೇಲಿನ ತೆರಿಗೆ ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಸರ್ಕಾರ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಬಡವರು ಬದುಕನ್ನು ಕಟ್ಟಿಕೊಳ್ಳಲು ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆಯ ಅಧಿಕಾರಿಗಳು ಚಾಲಕರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾರೆ. ಆಟೋ ಚಾಲಕರನ್ನು ಜೈಲಿಗೆ ಕಳಿಸಿ ರಿಕ್ಷಾಗಳನ್ನು ನಿರ್ನಾಮ ಮಾಡುವ ಹುನ್ನಾರ ನಡೆಯುತ್ತಿದೆ. ಅದಕ್ಕಾಗಿ ಎಲ್ಲಾ ಚಾಲಕರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ ಎಂದು ಜಾಗೃತಿ ಮೂಡಿಸಿದರು.