ಹೊಸಪೇಟೆ : ರಾಜ್ಯ ಪುರಾತತ್ವ ಇಲಾಖೆಗೆ ಸ್ವಂತ ಜಾಗವಿದ್ದರೂ ಸಹ ಸ್ವಂತ ಕಟ್ಟಡ ನಿರ್ಮಾಣಗೊಂಡಿಲ್ಲ. ಹಂಪಿ ಪ್ರವಾಸೋದ್ಯಮ ಇಲಾಖೆಯಲ್ಲಿ ಸಣ್ಣ ಕೊಠಡಿಯಲ್ಲಿ ಕಾರ್ಯನಿರ್ವಹಿಸುವ ಸ್ಥಿತಿ ಬಂದಿದೆ. ಕಳೆದ 40 ವರ್ಷಗಳಿಂದ ಕಟ್ಟಡ ನಿರ್ಮಾಣವಾಗದೇ ನನೆಗುದಿಗೆ ಬಿದ್ದಿದೆ.
ವಿಜಯನಗರ ಪುನರುತ್ಥಾನ ಯೋಜನೆಯಡಿ ವಿಜಯನಗರ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲು ಜಾಗವನ್ನು ಈಗಾಗಲೇ ನೀಡಲಾಗಿದೆ. ತಾಲೂಕಿನ ಕಮಲಾಪುರ ಬಳಿ ಹೆಚ್ಪಿಸಿ ಸರ್ವೇ ನಂ.206ರಲ್ಲಿ 8 ಎಕರೆ ಪುರಾತತ್ವ ಇಲಾಖೆಯ ಕಟ್ಟಡ ನಿರ್ಮಾಣಕ್ಕಾಗಿ ನೀಡಲಾಗಿದೆ.
ಜಾಗವನ್ನು ತುಂಗಭದ್ರಾ ಮಂಡಳಿಯು ಪುರಾತತ್ವ ಇಲಾಖೆಗೆ ಹಸ್ತಾಂತರ ಮಾಡಿದೆ. ಜಾಗದಲ್ಲಿ ಇಲಾಖೆ ಕಚೇರಿ, ವಿಜಯನಗರ ಸಂಶೋಧನಾಲಯ, ಸಿಬ್ಬಂದಿ ವಸತಿ ಗೃಹಗಳು ಸೇರಿ ಇನ್ನಿತರ ಕಟ್ಟೆಗಳು ನಿರ್ಮಾಣಗೊಳ್ಳಬೇಕಾಗಿದೆ. ಇದರಿಂದ ಪುರಾತತ್ವ ಇಲಾಖೆಗೆ ಸಾಕಷ್ಟು ಅನುಕೂಲವಾಗಲಿದೆ.
ಗಿಡಗಂಟಿಗಳ ತಾಣ : 8 ಎಕರೆ ಸ್ಥಳವನ್ನು ಕಳೆದ 40 ವರ್ಷಗಳಿಂದ ಹಾಗೇ ಬಿಡಲಾಗಿದೆ. ಹೀಗಾಗಿ ಗಿಡಗಂಟಿಗಳ ತಾಣವಾಗಿ ಮಾರ್ಪಾಡಾಗಿದೆ. ಅಲ್ಲದೇ, ಜಾಗದ ಪಕ್ಕದಲ್ಲಿ ಚರಂಡಿಯ ಕೊಳಚೆ ನೀರು ಹರಿಯುತ್ತಿದೆ. ಹಂದಿಗಳ ವಾಸಸ್ಥಾನವಾಗಿ ಮಾರ್ಪಾಡಾಗುವ ಕಾಲ ದೂರ ಉಳಿದಿಲ್ಲ.
ಇಚ್ಛಾಶಕ್ತಿ ಕೊರತೆ : ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಸ್ಥಳ ಉಪಯೋಗಕ್ಕೆ ಬರುತ್ತಿಲ್ಲ. ಟಿಬಿ ಬೋರ್ಡ್ ಜಾಗದ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಿ, ಗೇಟ್ ಅಳವಡಿಸಿತ್ತು. ಆದರೆ, ಈಗ ಗೇಟ್ ಕಾಣಿಸುತ್ತಿಲ್ಲ. ಇದು ನಿರ್ವಹಣೆ ವೈಫಲ್ಯತೆಯನ್ನ ಎದ್ದು ತೋರಿಸುತ್ತದೆ.
ಓದಿ: ಹಂಪಿಯ ಐತಿಹಾಸಿಕ ಕಲ್ಲಿನ ರಥದ ಸಂರಕ್ಷಣೆಗೆ ಸರಪಳಿ ಅಳವಡಿಕೆ
ಎರಡು ಕೊಠಡಿ ಪುರಾತತ್ವ ಇಲಾಖೆಗೆ : ಸದ್ಯ ಪುರಾತತ್ವ ಇಲಾಖೆಯು ಪ್ರವಾಸೋದ್ಯಮ ಇಲಾಖೆ ಶೆಡ್ನಲ್ಲಿ ಎರಡು ಕೊಠಡಿಯಲ್ಲಿ ಕಚೇರಿಯನ್ನಾಗಿ ಮಾಡಿಕೊಂಡಿದೆ. ಚಿಕ್ಕದಾದ ಕೊಠಡಿಯಲ್ಲಿ ಕೆಲಸವನ್ನು ಮಾಡುವಂತ ದುಸ್ಥಿತಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಬಂದಿದೆ.
ಹುದ್ದೆಗಳು ಖಾಲಿ : ಪುರಾತತ್ವ ಇಲಾಖೆಗೆ 14 ಹುದ್ದೆ ಮಂಜೂರಾಗಿವೆ. ಈ ಪೈಕಿ ಒಬ್ಬ ಸಿ ದರ್ಜೆ ಹಾಗೂ ಮೂರು ಡಿ ದರ್ಜೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಉಪ ನಿರ್ದೇಶಕರನ್ನು ಹೆಚ್ಚುವರಿಯನ್ನಾಗಿ ನೀಡಲಾಗಿದೆ. ಉಳಿದ ಹುದ್ದೆಗಳು ಖಾಲಿ ಉಳಿದಿವೆ. ಇದರಿಂದ ಕೆಲಸದ ಕಾರ್ಯಕ್ಷಮತೆಗೆ ಪೆಟ್ಟು ಬಿದ್ದಿದೆ.
ಜಾಗ ದೂರ : ಪುರಾತತ್ವ ಇಲಾಖೆಯ ಈಗಿನ ಸ್ವಂತ ಜಾಗ ದೂರವಾಗುತ್ತದೆ. ಕಮಲಾಪುರದಿಂದ 3 ಕಿ.ಮೀ. ನಷ್ಟು ಸ್ಥಳ ದೂರವಿದೆ. ಹೀಗಾಗಿ ಈವರೆಗೂ ಕಟ್ಟಡ ನಿರ್ಮಾಣವಾಗಿಲ್ಲ ಎಂಬ ಮಾತು ಕೇಳಿ ಬರುತ್ತಿವೆ.
ಈಟಿವಿ ಭಾರತದೊಂದಿಗೆ ರಾಜ್ಯ ಪುರಾತತ್ವ ಇಲಾಖೆಯ ಹೆಚ್ಚುವರಿ ಉಪನನಿರ್ದೇಶಕ ಪ್ರಹ್ಲಾದ್ ಅವರು ಮಾತನಾಡಿ, ಈಗಾಗಲೇ ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುದಾನ ಮಂಜೂರಾಗಬೇಕಾಗಿದೆ. ಈಗ ಸದ್ಯಕ್ಕೆ ಪ್ರವಾಸೋದ್ಯಮ ಕಟ್ಟಡದಲ್ಲಿ ಕಚೇರಿ ನಡೆಸಲಾಗುತ್ತಿದೆ ಎಂದರು.