ಬಳ್ಳಾರಿ: ನಮ್ಮ ಸರ್ಕಾರ 151 ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿದೆ. ನಾನು ಕೊಟ್ಟ ಮಾತು ಈಡೇರಿಸಿದ್ದೇನೆ. ಕೆಲಸದ ಮೂಲಕ ಉತ್ತರ ಕೊಟ್ಟಿದ್ದೇನೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವ ಬಿ ಶ್ರೀರಾಮುಲು ಹೇಳಿದರು.
ಎಸ್‍ಸಿ ಎಸ್ಟಿ ಮೀಸಲಾತಿ ಹೆಚ್ಚಿಸಿದ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬಳ್ಳಾರಿಯ ಎಸ್‍ಪಿ ವೃತ್ತದಲ್ಲಿ ಶ್ರೀರಾಮುಲು ಅಭಿಮಾನಿಗಳು ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಿಸುವುದಾಗಿ ಮಾತು ಕೊಟ್ಟ ವ್ಯಕ್ತಿ ಶ್ರೀರಾಮುಲು ಮೂರು ವರ್ಷಗಳಿಂದ ಎಷ್ಟು ಕಷ್ಟಪಟ್ಟಿರಬಹುದು ಅಂತ ಆಲೋಚನೆ ಮಾಡಿ. ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ನನ್ನನ್ನು ಗೇಲಿ ಮಾಡಿ ಹಿಯಾಳಿಸಿದ್ರು. ಆದ್ರೆ, ಇವತ್ತು ಮೀಸಲಾತಿ ಹೆಚ್ಚಾಗಿದೆ. ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ಅವರ ಆದರ್ಶಕ್ಕೆ ತಕ್ಕಂತೆ ಕೆಲಸ ಮಾಡಿದ್ದೇನೆ. ಎಸ್‍ಸಿ ಗೆ 15 ರಿಂದ 17 % ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಎಸ್‍ಟಿಗೆ ಶೇ.3 ರಿಂದ 7% ಮೀಸಲಾತಿ ಹೆಚ್ಚು ಮಾಡಿರುವುದು ನನ್ನ ಸರ್ಕಾರ ಎಂದು ಹೇಳಿದರು.
ಇದನ್ನೂ ಓದಿ: ಈಡೇರಿದ ಮೀಸಲಾತಿ ಬೇಡಿಕೆ.. ನನ್ನನ್ನು ಗೇಲಿ ಮಾಡುತ್ತಿದ್ದವರಿಗೆ ಈಗ ನೆಮ್ಮದಿ ಸಿಕ್ಕಿದೆ.. ಸಚಿವ ಶ್ರೀರಾಮುಲು
ಮೀಸಲಾತಿ ಹೆಚ್ಚಳದಿಂದ ಸಮುದಾಯದ ಜನರಿಗೆ ಶೈಕ್ಷಣಿಕ, ಉದ್ಯೋಗದಲ್ಲಿ ಲಾಭ ದೊರೆಯಲಿದೆ. ನಮ್ಮ ಮಕ್ಕಳು ಶಿಕ್ಷಣ ಪಡೆದು ಡಾಕ್ಟರ್, ಇಂಜಿನಿಯರ್ಗಳಾಗುತ್ತಾರೆ. ಎಸ್‍ಪಿ, ಡಿಸಿ ಗಳಾಗುತ್ತಾರೆ. ಮುಂಬರುವ ದಿನಗಳಲ್ಲಿ ಎಸ್‍ಟಿ ಸಮುದಾಯದವರಿಗೆ ನೂರಕ್ಕೆ 7 ಕೆಲಸಗಳು ಸಿಗುತ್ತವೆ. ಪರಿಶಿಷ್ಟ ಜಾತಿಯ ನಮ್ಮ ಜನರಿಗೆ ನೂರರಲ್ಲಿ 17 ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಹೇಳಿದ ಶ್ರೀರಾಮುಲು, ನಮ್ಮ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ. ಗೇಲಿ ಮಾಡಿದ ಜನ ನೀವೆಲ್ಲಿದ್ದೀರಿ? ಎಂದು ಪ್ರಶ್ನಿಸಿದರು.
'ಶ್ರೀರಾಮುಲು ಕರ್ನಾಟಕದ ಹುಲಿ, ಗಂಡುಗಲಿ, ನಾಯಕ ಅಲ್ಲ, ನುಡಿದಂತೆ ನಡೆದ ಒಬ್ಬ ಮಹಾನಾಯಕ. ವಾಲ್ಮೀಕಿ ಜಯಂತಿಗೆ ಮೊದಲೇ ಎಸ್ಟಿ ಸಮುದಾಯಕ್ಕೆ ಶೇ.4 ರಷ್ಟು ಮೀಸಲಾತಿ ಜಾಸ್ತಿ ಮಾಡಿಯೇ ಬಳ್ಳಾರಿಗೆ ಬರುತ್ತೇನೆ ಎಂದು ಹೇಳಿದ್ದರು. ಅದಕ್ಕಾಗಿ ನಾವಿಂದು ಒಬ್ಬ ದೇಶದ ನಾಯಕನನ್ನು ಬರಮಾಡಿಕೊಂಡಂತೆ ಬರಮಾಡಿಕೊಂಡಿದ್ದೇವೆ' ಎಂದು ಬಳ್ಳಾರಿ ನಗರ ಶಾಸಕ ಜಿ ಸೋಮಶೇಖರ ರೆಡ್ಡಿ ಹೇಳಿದರು.
ಇದನ್ನೂ ಓದಿ: ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ: ಧರಣಿ ಕೈಬಿಟ್ಟ ಪ್ರಸನ್ನಾನಂದ ಸ್ವಾಮೀಜಿ, ಸಂಭ್ರಮಾಚರಣೆ
ಶ್ರೀರಾಮುಲು ಅವರನ್ನು ಮೂವತ್ತು ವರ್ಷಗಳಿಂದ ನೋಡುತ್ತಿದ್ದೇವೆ. ಮಾತು ಕೊಟ್ಟರೆ ತಪ್ಪುವುದಿಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ಶ್ರೀರಾಮುಲು ಗಲ್ಲಿಯಿಂದ ದೆಹಲಿಯವರೆಗೆ ಮನೆ ಮಾತಾಗಿದ್ದಾರೆ. ನೀವು ಎಷ್ಟು ಪ್ರೀತಿ ತೋರಿಸಿದ್ದೀರೆಂದರೆ ನಿಮ್ಮ ಋಣ ತೀರಿಸಲು ನಾವು ಇನ್ನೊಂದು ಜನ್ಮ ಹುಟ್ಟಿ ಬರಬೇಕು ಎಂದು ಹೇಳಿದ ಶಾಸಕ ರೆಡ್ಡಿ, ವಿಜಯದಶಮಿ ದಿನ ರಾಮ, ರಾವಣನಿಗೆ ಒಂದು ಬಾಣ ಹೊಡೆದ. ರಾವಣ ಸುಟ್ಟು ಹೋದ. ಅದೇ ರೀತಿ ಕಾಂಗ್ರೆಸ್‍ಗೆ ಬಾಣ ಹಾಕಬೇಕು. ಬಾಣ ಹಾಕಿದ್ರೆ ಫಿನಿಷ್ ಎಂದು ಹೇಳಿದರು.
ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಘೋಷಣೆ.. ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ
ಕಾರ್ಯಕ್ರಮದಲ್ಲಿ ಮಾಜಿ ಸಂಸದರಾದ ಜೆ.ಶಾಂತಾ, ಸಣ್ಣ ಫಕೀರಪ್ಪ, ಮಾಜಿ ಶಾಸಕ ಸುರೇಶ್ ಬಾಬು, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಪಾಲಿಕೆ ಸದಸ್ಯರಾದ ಮೋತ್ಕರ್ ಶ್ರೀನಿವಾಸ್, ಗೋವಿಂದರಾಜುಲು ಸೇರಿದಂತೆ ಹಲವರು ಹಾಜರಿದ್ದರು.