ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್‌ನಿಂದ ನಿನ್ನೆ ಬಳ್ಳಾರಿ ಮಹಾನಗರದ ಮಹಾನಂದಿ ಬೀದಿಯಲ್ಲಿ ದಿನಸಿ ವಿತರಣೆ ವೇಳೆ ಶಾಸಕ ಸೋಮಶೇಖರ ರೆಡ್ಡಿ ಬೆಂಬಲಿಗರು ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ.
ಈ ಕುರಿತು ನಿನ್ನೆ ’ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಿಟ್ ವಿತರಿಸಿದ ಸೋಮಶೇಖರ್ ರೆಡ್ಡಿ ಬೆಂಬಲಿಗರು..’ ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ಸುದ್ದಿ ಪ್ರಕಟಿಸಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಶಾಸಕರು ಮತ್ತು ಬೆಂಬಲಿಗರು ಇಂದು ರಾಯಲ್ ಕಾಲೋನಿಯಲ್ಲಿ ಆಯೋಜಿಸಿದ್ದ ತರಕಾರಿ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡರು.
ರಾಯಲ್ ಕಾಲೋನಿಯಲ್ಲಿ ತರಕಾರಿ ವಿತರಣೆ ಕಾರ್ಯಕ್ರಮದಲ್ಲಿ ಒಂದು ಮೀಟರ್ ಅಂತರದಲ್ಲಿ ಬಾಕ್ಸ್ ಹಾಕುವ ಮೂಲಕ ಅಂತರ ಕಾಯ್ದುಕೊಂಡರು. ಮೂರು ಅಡಿಯ ಉದ್ಧದ ಕೋಲನ್ನ ಹಿಡಿದುಕೊಂಡು ದೂರ ನಿಲ್ಲುವಂತೆ ಸೂಚನೆ ನೀಡಿ ತರಕಾರಿ ಹಂಚಿಕೆ ಮಾಡಿದರು.
ಬಳಿಕ ಶಾಸಕ ಗಾಲಿ ಸೋಮಶೇಖರರೆಡ್ಡಿಯವರು ಮಾತನಾಡಿ, ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಬಡ ಹಾಗೂ ಕೂಲಿ ಕಾರ್ಮಿಕರಿಗೆ ತರಕಾರಿ ಕೊರತೆ ಎದುರಾಗಿದೆ. ಹೀಗಾಗಿ ನಮ್ಮ ಕಾರ್ಯಕರ್ತರು ತರಕಾರಿಯನ್ನ ವಿತರಿಸುವ ಮೂಲಕ ಆ ಕೊರತೆ ನೀಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.